


ದೇವರ ಬಗ್ಗೆ ಅಪಾರವಾದ ಭಕ್ತಿ ಶ್ರದ್ಧೆ ಇರುವವರು ಭಾರತೀಯರು. ಇಲ್ಲಿ ಹಿಂದು, ಕ್ರೈಸ್ತ, ಮುಸಲ್ಮಾನ, ಬೌದ್ಧ, ಫಾರ್ಸಿ, ಸಿಖ್ ಯಾರೇ ಇರಲಿ, ಇಲ್ಲಿನ ಒಟ್ಟು ಆಗು ಹೋಗುಗಳ ಕೊನೆಯ ನಿರ್ಣಯ ಭಗವಂತನದ್ದು ಅನ್ನುವುದು ಪ್ರತೀಯೋರ್ವನ ನಂಬಿಕೆ. ಹಾಗೆ ನೋಡಿದರೆ ಬದುಕು ನಿಂತಿರುವುದೇ ನಂಬಿಕೆಯ ಆಧಾರದ ಮೇಲೆ. ಇಂದು ಮಲಗಿದರೆ ನಾಳೆ ಎದ್ದೇಳುತ್ತೇನೆ ಅನ್ನುವ ನಮ್ಮ ನಂಬಿಕೆ ದೃಢವಾದುದು; ಅದಕ್ಕೆ ಕಾರಣ ‘ತೇನವಿನಾ ತೃಣಮಪಿ ನಚಲತಿ’ ಅನ್ನುವುದು. ಹೀಗೆ ಭಗವಂತನ ಮೇಲೆ ಎಲ್ಲಾ ಭಾರವನ್ನು ಹಾಕುವುದರ ಮೂಲಕ ತನ್ನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾನೆ, ಜತೆಯಲ್ಲೇ ತಾನು ಒಂದು ಕ್ಷಣ ಧ್ಯಾನಾಸಕ್ತನಾಗಿ ಆತ್ಮ ಸ್ಥೈರ್ಯವನ್ನು ವೃದ್ಧಿಸಿಕೊಳ್ಳಿತ್ತಾನೆ, ಈ ಮೂಲಕ ತನ್ನ ಹೋರಾಟದ ದಾರಿಯನ್ನು ಸುಗಮವಾಗಿಸಿಕೊಳ್ಳುತ್ತಾನೆ.
ನಮ್ಮ ಇಡೀ ಜೀವನ ಶೈಲಿ ಐಹಿಕ ಬದುಕಿಗಿಂತಲೂ ಪಾರಮಾರ್ಥಿಕದತ್ತ ಹೆಚ್ಚು ಬೆಳಕು ಚೆಲ್ಲುವಂತಹದ್ದು. ಇದು ಭೋಗ ಭೂಮಿಯಲ್ಲ ಕರ್ಮಭೂಮಿ; ನಿಯತಂ ಕುರು ಕರ್ಮತ್ವಂ ಅನ್ನುವುದೇ ಇಲ್ಲಿನ ಸ್ಲೋಗನ್; ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ’ ಅನ್ನುವುದನ್ನೂ ಇದರೊಂದಿಗೆ ಸೇರಿಸಿಕೊಂಡಾಗ ವಿದೇಶೀಯರ ಹಣ ಮಾಡುವ ವ್ಯಾಮೋಹದಿಂದ ಬಿಡುಗಡೆ ಯಾಗುತ್ತೇವೆ, ಅಲ್ಲಿನ ಭೋಗಭಾಗ್ಯಕ್ಕೆ ಬಲಿಯಾಗಿ ಇರುಳಿನ ನಿದ್ದೆಗಾಗಿ ಗುಳಿಗೆ ಸೇವಿಸುವ ಪ್ರಮೇಯ ನಮಗೆ ಬರುವುದಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ, ಇದ್ದದ್ದರಲ್ಲಿ ತೃಪ್ತರಾಗುವುದೇ ಇಲ್ಲಿನ ಸಿದ್ಧಾಂತ. ‘ಒಂದಷ್ಟು ದೊರಕಿದರೆ ಇನ್ನಷ್ಟು ಬೇಕೆಂಬಾಷೆ’ ಇದು ಜೀವವಿರೋಧಿ ಅನ್ನುವುದೇ ಇಲ್ಲಿನ ತೀರ್ಮಾನ. ಇವೆಲ್ಲವೂ ಈ ಮಣ್ಣಿನ ಗುಣ. ಇದಕ್ಕಾಗಿಯೇ ಇಂದು ಹಲವಾರು ಮಂದಿ ವಿದೇಶೀಯರು ನಮ್ಮಲ್ಲೇ ನೆಲೆನಿಂತು ಇಲ್ಲಿನ ಜನಗಳನ್ನು, ಜನಜೀವನವನ್ನು ಅಧ್ಯಯನ ಮಾಡುತ್ತಾರೆ. ಅವರಿಗೆ ಇಲ್ಲಿನ ಜೀವನ ಶೈಲಿಯೇ ಫಿಲಾಸಫಿ ಅದುವೇ ಸೈಕಾಲಜಿ. ಇಲ್ಲಿನ ನೈಜ ಶಿಕ್ಷಣವೆಂದರೆ ಅದು ಸರ್ಟಿಫಿಕೇಟ್ ಅಲ್ಲ ಬದಲಾಗಿ ಸಂಸ್ಕೃತಿ ಪ್ರಣೀತ ಅನುಭವ, ಅದು ಪಾಪ ಪುಣ್ಯಗಳನ್ನೂ ಕ್ಲಾರಿಫೈ ಮಾಡುತ್ತದೆ. ಇದೆಲ್ಲವೂ ಈಗಲೂ ಅದರ ಪರಿಪೂರ್ಣತೆಯಲ್ಲಿ ಇದೆಯೇ ಎಂದು ನೀವು ಪ್ರಶ್ನಿಸಬಹುದು; ಹೌದು, ನಾವು ಯಾವತ್ತೂ ಒಂದು ಕ್ರಿಯೆಯಲ್ಲಿ ತೊಡಗಿದಾಗ ಅದು ನಮ್ಮನ್ನು ಎಚ್ಚರಿಸುತ್ತಿರುತ್ತದೆ. ಅದು ನಮ್ಮ ಪರಂಪರೆಯಿಂದ ಬಂದ ವಂಶವಾಹಿ ಗುಣ. ಎಷ್ಟೋ ಸಂದರ್ಭಗಳಲ್ಲಿ ವಿಜ್ಞಾನವೂ ಕೂಡ ಈ ಮಣ್ಣಿನ ಧಾತುವಿಗೆ ಶರಣಾಗುತ್ತದೆ. ಹೆಚ್ಚಿನಂಶ ಇದನ್ನೆಲ್ಲಾ ನೋಡಿಯೇ ಅಮೇರಿಕಾದ ವಿಜ್ಞಾನಿಗಳು ಭಾರತೀಯರಿಗಿರುವ ದೇವರಮೇಲಿನ ನಂಬಿಕೆಯನ್ನು ಹಾಗೂ ಪರಿಸರಾಧಾರಿತ ಆಚಾರವಿಚಾರಗಳನ್ನು ನೋಡಿ ಇತ್ತೀಚೆಗೆ ‘a kind of spirit is there’ ಎಂದು ಉದ್ಗಾರ ತೆಗೆಯುತ್ತಾರೆ. ಇದೆಲ್ಲಾ ನಮ್ಮ ಅಂತಃಶಕ್ತಿಗೆ ಪ್ರೇರಕ. ಹೀಗಿರುವಲ್ಲಿ ಕೊರೊನದಂತಹ ಮಹಾಮಾರಿ ತನ್ನ ವಿಜಯ ಪತಾಕೆಯನ್ನು ಇಂತಹ ಕರ್ಮಭೂಮಿಯಲ್ಲಿ ಹಾರಿಸುವುದು ಕಷ್ಟಕರ ಅಲ್ವೆ?
ರಾಜಮಣಿ ರಾಮಕುಂಜ





