






ಬಂಟ್ವಾಳ : ಕೊರೊನಾ ನಿಗ್ರಹಕ್ಕಾಗಿ ಪ್ರತೀ ಗುರುವಾರ ಉಪವಾಸ ಕೈಗೊಂಡಿರುವ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವದ ಯಕ್ಷ ಕೂಟದ ವತಿಯಿಂದ ಕೊರೊನ ನಿಗ್ರಹಕ್ಕಾಗಿ ಸಾಮೂಹಿಕ ಪ್ರಾರ್ಥನೆ ಮತ್ತು ವಾರದ ತಾಳಮದ್ದಳೆ ಕೂಟ ಬಗ್ಗೆ ಸಮಾಲೊಚನ ಸಭೆ ಮಧ್ವಾಚಾರ್ಯ ಕಟ್ಟೆ ಸಭಾಂಗಣದಲ್ಲಿ ಗುರುವಾರ ಜರಗಿತು.
ಶ್ರೀ ಕ್ಷೇತ್ರ ಕಾರಿಂಜದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ಮಾತನಾಡಿ, ಶ್ರೀ ಕ್ಷೇತ್ರ ಕಾರಿಂಜದಲ್ಲಿ ಮಧ್ವಾಚಾರ್ಯರ ಮತ್ತು ಅವರು ಅವತಾರವೆನಿಸಿದ ಭೀಮಸೇನನ ಸಂಬಂಧವಿದೆ. ಮಧ್ವಾಚಾರ್ಯರಿಗೆ ಪ್ರಿಯವಾದ ಯಕ್ಷಗಾನ ಕೂಟಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಯಕ್ಷಕೂಟ ಸಂಚಾಲಕ ಭಾಸ್ಕರ ಶೆಟ್ಟಿ ಮಧ್ವ ಅವರು ಮಾತನಾಡಿ, ಉಪವಾಸ ಕೈಗೊಂಡಿರುವ ಯಕ್ಷಕೂಟ ಸಂಘದ ಸದಸ್ಯರ ಮತ್ತು ಊರವರ ಸಂಕಲ್ಪದಂತೆ ಕೊರೊನ ಹೋರಾಟಗಾರರ ಆರೋಗ್ಯಕ್ಕಾಗಿ ಮತ್ತು ಕೊರೊನಾ ಮುಕ್ತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದರು.
ನಿವೃತ್ತ ಕಂದಾಯ ಅಧಿಕಾರಿ ನಾರಾಯಣ ಕೆರ್ಮುಣ್ಣಾಯ, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ಆನಂದ ಪೂಜಾರಿ ಮಧ್ವ, ಶ್ರೀ ಕ್ಷೇತ್ರ ಕಾರಿಂಜದ ಅರ್ಚಕ ಜಯ ಶಂಕರ ಉಪಾಧ್ಯಾಯ, ವಗ್ಗ ಹಾ.ಉ. ಸಂಘದ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು, ಪ್ರಮುಖರಾದ ಉದಯ ಕುಮಾರ್ ಜೈನ್, ಜಿನೇಂದ್ರ ಜೈನ್, ಚಂದ್ರಹಾಸ್ ಶೆಟ್ಟಿ, ರಮೇಶ್ ನಾಯ್ಕ, ಗೋಪಾಲಕೃಷ್ಣ ಬಂಗೇರ, ನಾರಾಯಣ ಶೆಟ್ಟಿ ಮಧ್ವ, ಸತೀಶ್ ಶೆಟ್ಟಿ ಆರ್.ಕೆ., ಬೇಬಿ ಕುಂದರ್ ಮಧ್ವ, ವೆಂಕಪ್ಪ ಕುಂದರ್, ವಾಸು ಶೆಟ್ಟಿ, ಧನಂಜಯ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸದಸ್ಯರ ಸೇರುವಿಕೆಯಲ್ಲಿ ವಾರದ ತಾಳಮದ್ದಳೆ ಕೂಟ ನಡೆಸಲು ತೀರ್ಮಾನಿಸಲಾಯಿತು.
ಪ್ರಸ್ತುತ ವಿದೇಶದಲ್ಲಿರುವ ಇಲ್ಲಿನ ಮಧ್ವ ಪಾರೊಟ್ಟು ನಿವಾಸಿ, ಮಾಜಿ ಗ್ರಾ.ಪಂ.ಸದಸ್ಯ ಸದಾಶಿವ ಅಮೀನ್ ಅವರು ಕೂಡಾ ಪ್ರತೀ ಗುರುವಾರ ಉಪವಾಸ ವೃತ ಕೈಗೊಂಡಿದ್ದು ಇತರರಿಗೂ ಪ್ರೇರಣೆಯಾಗಿದ್ದಾರೆ.





