


ಏರಿಳಿತಗಳ ಹಾದಿಯಲಿ
ಅನವರತದಿ ಸಾಗಿದೆ
ಬಾಳ ಕಥನ….
ಜೀವಂತ ಕಾಯಗಳ
ಜೀವಂತಿಕೆಯ ತುಡಿತ
ಮಿಡಿತ ನಿತ್ಯ ನೂತನ….
ಇಟ್ಟ ದಿಟ್ಟ ಹೆಜ್ಜೆಯಲಿ
ಬೆಳಕು ಕತ್ತಲನು ಮೆಟ್ಟಿ
ನಡೆದ ಕುರುಹುಗಳಿವೆ….
ಎದೆಯಾಳದಿ ಪವಡಿಸಿದ
ದುಮ್ಮಾನ ಸಮ್ಮಾನಗಳ
ಸಮ್ಮಿಲನಗಳಿವೆ….
ನಗೆ ಬುಗ್ಗೆ ತವಕ ಪುಳಕ
ಪರಿಧಿಯ ಎಲ್ಲೆ ಮೀರಿ
ಪಯಣಿಸುತ್ತಿದೆ….
ತನು ಮನ ಚಿಲುಮೆ ಚೈತನ್ಯದ
ಚಿತ್ತಾರವನು ಎಲ್ಲೆಡೆ
ಬಿತ್ತರಿಸುತ್ತಿದೆ….
ಅರ್ಥಗರ್ಭಿತ ಅಂತರ್ಗತ
ಭಾವದ ಹೊನಲು ಸುಧೆಯಾಗಿ
ಹರಿಯುತ್ತಿದೆ….
ನೆಮ್ಮದಿ ನಿಶ್ಚಿಂತೆಯಲಿ
ಬದುಕ ನಾವೆ ತೀರದುದ್ದಕ್ಕೂ
ಸಾಗುತ್ತಿದೆ….
ನೆನಪುಗಳ ತರಂಗದಿ
ಭರವಸೆಯ ಬೆಳಕಿನಲಿ
ಬೆಸೆದ ಪಯಣ….
ರಂಗಿನಾಟದಿ ಆದಿ ಅಂತ್ಯದ
ನಡೆಯೊಳು ಬಾಳಬುತ್ತಿಯ
ಮಧುರಯಾನ….
ಮಗ್ಗುಲು ಬದಲಿಸದೆ
ಹೆಗ್ಗಳಿಕೆಯ ಹೆಗಲೇರಲಿ
ಬಾಳ ಹೊತ್ತಗೆ….
ಅಲ್ಪಕಾಲದ ಪಾದದ
ಗುರುತು ಗೋಚರಿಸಲಿ
ಬೆಳಕ ತೆರೆಗೆ…..
@ ತುಳಸಿ ಕೈರಂಗಳ್ @







