



ವಿಟ್ಲ: ಮಾಸ್ಕ್ ಹಾಕದೇ ಬರುವ ವ್ಯಕ್ತಿಗಳ ಜತೆಗೆ ವರ್ತಕರು ಯಾವುದೇ ವ್ಯವಹಾರ ನಡೆಸಬಾರದು. ಮುಸಲ್ಮಾನ ಬಾಂಧವರ ರಮ್ಜಾನ್ ಹಬ್ಬದ ಪ್ರಯುಕ್ತ ಮೇ 18ರಿಂದ ಮೇ 25ರವರೆಗೆ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಅಂಗಡಿಗಳನ್ನು ಬಂದ್ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ. ಹೇಳಿದರು.
ಅವರು ವಿಟ್ಲ ಅರಮನೆ ರಸ್ತೆಯ ಶ್ರೀನಿವಾಸ ಟ್ರೇಡರ್ಸ್ನ ಮೂರನೇ ಮಹಡಿಯಲ್ಲಿ ಬುಧವಾರ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಪಟ್ಟಣ ಪಂಚಾಯಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಸಂಘದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಗೌರವಾಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್ ನಾವೆಲ್ಲರೂ ಒಗ್ಗಟ್ಟಾಗಿರೋಣ. ವಿಟ್ಲಕ್ಕೆ ಕೊರೊನಾ ವೈರಸ್ ಹರಡದಂತೆ ಎಲ್ಲರೂ ಜಾಗ್ರತೆ ವಹಿಸೋಣ ಎಂದರು.
ಕೋಶಾಧಿಕಾರಿ ಆಂಟನಿ ಲೋಬೋ ಉಪಸ್ಥಿತರಿದ್ದರು. ರಾಮದಾಸ ಶೆಣೈ, ಶ್ರೀಕೃಷ್ಣ ವಿಟ್ಲ, ಅನಂತಪ್ರಸಾದ್, ರಶೀದ್ ವಿಟ್ಲ, ವಿ.ಎಸ್.ಇಬ್ರಾಹಿಂ, ಅಚ್ಯುತ, ಆರ್.ಎಸ್.ಲಕ್ಷ್ಮಣ ಪೂಜಾರಿ ಮತ್ತಿತರರು ಸಲಹೆ ಸೂಚನೆ ನೀಡಿದರು. ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್ ನಿರ್ಣಯಗಳನ್ನು ಮಂಡಿಸಿ, ವಂದಿಸಿದರು.





