ಬಂಟ್ವಾಳ: ಜನರಿಂದ ಅಧ್ಯಕ್ಷನಾಗಿ ಆಯ್ಕೆಯಾದ ನಾನು ಐದು ವರ್ಷದ ಅವಧಿಯಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಜನರ ಸೇವೆ ಮಾಡಲು ಗರಿಷ್ಠ ಪ್ರಯತ್ನ ಮಾಡಿದ್ದೇನೆ. ಇದಕ್ಕಾಗಿ ನನಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸಹಕರಿಸಿದ ಎಲ್ಲರಿಗೂ ಋಣಿಯಾಗಿದ್ದೇನೆ ಎಂದು ಸಜಿಪ ನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ಹೇಳಿದ್ದಾರೆ.

ಗ್ರಾಮ ಪಂಚಾಯತ್ ಸಭಾ ಭವನ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುರುವಾರ ಲೋಕಾರ್ಪಣೆ ಗೊಳಿಸಿದ ಬಳಿಕ ನಡೆದ ಸರಳ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕ್ಷೇತ್ರದ ಶಾಸಕ ಯು.ಟಿ.ಖಾದರ್, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ವಿಧಾನ ಪರಿಷತ್ ಸದಸ್ಯರು ಸಹಿತ ಎಲ್ಲಾ ಜನಪ್ರತಿನಿಧಿಗಳು, ಗ್ರಾಪಂ ಸದಸ್ಯರು, ಪಿಡಿಒ, ಸಿಬ್ಬಂದಿ ಹಾಗೂ ಕಂದಾಯ, ಪೊಲೀಸ್ ಅಧಿಕಾರಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು.

ಗ್ರಾಮದ ಅಭಿವೃದ್ಧಿಯ ವಿಷಯದಲ್ಲಿ ನಾನೆಂದೂ ಉದಾಸೀನ, ತಾರತಮ್ಯ ತೋರಿಸಿಲ್ಲ. ಸಂಸದ, ಶಾಸಕ, ಸಚಿವರು, ತಾಪಂ, ಜಿಪಂ ಸದಸ್ಯರನ್ನು ನಿರಂತರ ಭೇಟಿ ಮಾಡಿ ಗ್ರಾಮಕ್ಕೆ ಹಿಂದೆಂದೂ ಬಾರದಷ್ಟು ಅನುದಾನವನ್ನು ತಂದಿದ್ದೇನೆ. ಅಲ್ಲದೆ ಎಸ್.ಡಿ.ಪಿ.ಐ. ಪಕ್ಷದಿಂದಲೂ ಧನ ಸಹಾಯ ಪಡೆದು ಮಾಹಿತಿ ಕೇಂದ್ರ ಸಹಿತ ಗ್ರಾಮದಲ್ಲಿ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ. ಮಾಹಿತಿ ಕೇಂದ್ರ ಕ್ರಾಂತಿಕಾರಿ ಯೋಜನೆಯಾಗಿದ್ದು ಇದರಿಂದ ಗ್ರಾಮದ ಹಾಗೂ ನೆರೆ ಗ್ರಾಮದ ಸಾವಿರಾರು ಮಂದಿ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಹೇಳಿದರು.

ಐದು ವರ್ಷಗಳಲ್ಲಿ ರಸ್ತೆ, ಚರಂಡಿ, ನೀರು, ಬೀದಿ ದೀಪ ಸೇರಿದಂತೆ ಗ್ರಾಮದಲ್ಲಿ ಸುಮಾರು 10 ಕೋಟಿ ರೂಪಾಯಿಯಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಸಜಿಪ ನಡು ಗ್ರಾಮ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಮಾದರಿ ಗ್ರಾಮವಾಗಿ ಅಭಿವೃದ್ಧಿ ಗೊಂಡಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಮಾತನಾಡಿ, ಚುನಾವಣಾ ರಾಜಕೀಯವೇ ಬೇರೆ ಅಭಿವೃದ್ಧಿ ರಾಜಕೀಯವೇ ಬೇರೆ. ಗ್ರಾಮದ ಅಭಿವೃದ್ಧಿಗೆ ನಾನೂ ಅನುದಾನವನ್ನು ನೀಡಿದ್ದೇನೆ. ಯಾರ ಬಳಿ ಅನುದಾನ ಇದೆಯೋ ಅದನ್ನು ಹುಡುಕಿ ತಂದು ಗ್ರಾಮದ ಅಭಿವೃದ್ಧಿಯನ್ನು ಮಾಡುವ ಈ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಅವರ ಕೆಲಸ, ಸುಂದರ ಗ್ರಾಮದ ಕಲ್ಪನೆ ಮಾದರಿಯಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ್ ಸಭಾ ಭವನ ಮತ್ತು ರಸ್ತೆ ನಾಮ ಫಲಕವನ್ನು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಉದ್ಘಾಟಿಸಿದರು. ಸರಕಾರಿ ಶಾಲೆಯ ನೂತನ ವೇದಿಕೆಯನ್ನು ಜಿಪಂ ಸದಸ್ಯ ರವೀಂದ್ರ ಕಂಬಳಿ, ದಾನಿಯ ನೆರವಿನಿಂದ ಶಾಲೆಗೆ ಅಲವಡಿಸಿರುವ ಸಿಸಿ ಕೆಮರಾವನ್ನು ಗ್ರಾಪಂ ಸದಸ್ಯ ಇಕ್ಬಾಲ್, ಗ್ರಾಮೀಣ ಅಂಚೆ ಕಚೇರಿಯನ್ನು ಗ್ರಾಪಂ ಉಪಾಧ್ಯಕ್ಷೆ ಶಾಂತಿ ಮೊರೇಸ್ ಉದ್ಘಾಟಿಸಿದರು. ಸಮಾರಂಭದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ವಿವರಗಳಿರುವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಗ್ರಾಪಂ ಸದಸ್ಯರಾದ ಇಕ್ಬಾಲ್, ರಶೀದ್, ಸುರೇಶ್, ರಫೀಕ್, ಶಿಸಿಲಿಯಾ ವಸ್, ಮುಮ್ತಾಝ್, ಬಿಫಾತಿಮಾ, ಕಲ್ಯಾಣಿ, ಬಿ.ಕೆ.ನಸೀಮ ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನೊನು ಸ್ವಾಗತಿಸಿದರು, ಗ್ರಾಪಂ ಸಿಬ್ಬಂದಿ ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here