ಬಂಟ್ವಾಳ: ಮನವೊಲಿಸಲು ಅಧಿಕಾರಿಗಳು ಶತ ಪ್ರಯತ್ನಪಟ್ಟರೂ ಅವರನ್ನು ಲೆಕ್ಕಿಸದೆ ಜಾರ್ಖಂಡ್ಗೆ ಕಾಲ್ನಡಿಗೆಯಲ್ಲೇ ಹೊರಡುತ್ತೇವೆ ಎಂದು ಹಠ ಹಿಡಿದು ಮಂಗಳೂರಿನಿಂದ ಹೊರಟ ಮಹಿಳೆಯರು, ಮಕ್ಕಳ ಸಹಿತ ನೂರಾರು ಕಾರ್ಮಿಕರನ್ನು ಕೊನೆಗೂ ಪೊಲೀಸರು ಮನವೊಲಿಸಿ ಬಂಟ್ವಾಳದ ಬಂಟರ ಭವನದಲ್ಲಿ ತಾತ್ಕಾಲಿಕವಾಗಿ ಉಳಿಯುವಂತೆ ಮಾಡುವಲ್ಲಿ ಮಂಗಳವಾರ ಮಧ್ಯ ರಾತ್ರಿ 2 ಗಂಟೆಯ ವೇಳೆಗೆ ಯಶಸ್ವಿಯಾದರು.

ಲಾಕ್ಡೌನ್ನಿಂದ ಮಂಗಳೂರಿನ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜಾರ್ಖಂಡ್ ರಾಜ್ಯದ ಸುಮಾರು 1200 ಕ್ಕೂ ಅಧಿಕ ಕಾರ್ಮಿಕರು ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಕ್ಕೆ ತೆರಲುವುದಾಗಿ ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಹೊರಟ್ಟಿದ್ದರು. ಈ ಬಗ್ಗೆ ವಿಷಯ ತಿಳಿದ ಅಧಿಕಾರಿಗಳು ಮಾರ್ಗ ಮಧ್ಯೆ ಕಾರ್ಮಿಕರನ್ನು ತಡೆದು ಮನವೊಲಿಸಲು ಶತ ಪ್ರಯತ್ನ ಪಟ್ಟರೂ ಮಂಗಳೂರು ಪೋಲೀಸ್ ಅಧಿಕಾರಿಗಳ ಮಾತುಗಳನ್ನು ಲೆಕ್ಕಿಸದೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು.
ಮಂಗಳೂರು ನಗರದಿಂದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಮಕ್ಕಳು, ಮಹಿಳೆಯರು ಹಾಗೂ ತಮ್ಮ ಬಟ್ಟೆಬರೆಗಳನ್ನು ಗಂಟುಮೂಟೆ ಕಟ್ಟಿ ಹೊರಟ ಕಾರ್ಮಿಕರನ್ನು ಮಾರ್ಗ ಮಧ್ಯೆ ವಿವಿಧೆಡೆ ತಡೆದು ನಿಲ್ಲಿಸಿದ ಮಂಗಳೂರು ಪೋಲೀಸ್ ಅಧಿಕಾರಿಗಳು, ಮೂರು ದಿನ ಇಲ್ಲೇ ಇರಿ. ಬಳಿಕ ನಿಮ್ಮನ್ನು ಊರಿಗೆ ತಲುಪಿಸಲು ರೈಲಿನ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯವರೆಗೆ ಊಟ, ತಿಂಡಿಯ ವ್ಯವಸ್ಥೆಯೂ ಮಾಡುತ್ತೇವೆ ಎಂದು ಮನವೊಲಿಸಿದರು. ಆದರೆ ಕಾರ್ಮಿಕರು ಯಾರ ಮಾತನ್ನೂ ಲೆಕ್ಕಿಸದೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು.
ಕೊನೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಮುಗಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವ್ಯಾಪ್ತಿಯ ಗಡಿಯಾದ ಆರ್ಕುಲದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ನೇತೃತ್ವದಲ್ಲಿ  ಬಂಟ್ವಾಳ ಪೋಲೀಸರ ತಂಡ ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು. ಆರಂಭದಲ್ಲಿ ಯಾರ ಮಾತಿಗೂ ಜಗ್ಗದ ಕಾರ್ಮಿಕರು ಕೊನೆಗೆ ಬ್ರಹ್ಮರಕೊಟ್ಲು ಟೋಲ್ಗೇಟ್ ಸಮೀಪದಲ್ಲಿರುವ ಬಂಟರ ಭವನದಲ್ಲಿ ಉಳಿದುಕೊಳ್ಳಲು ಎಸ್ಪಿ ಲಕ್ಮೀಪ್ರಸಾದ್ ಹಾಗೂ ಬಂಟ್ವಾಳ ಪೋಲೀಸರ ತಂಡ ಅವರು ಮಾಡಿದ ಮನವಿಗೆ ತಲೆಯಾಡಿಸಿದರು.
ಕಾರ್ಮಿಕರು ನಡೆದುಕೊಂಡು ಬರುವ ವಿಷಯ ತಿಳಿದ ಕೆಲವರು ಕಾರ್ಮಿಕರಿಗೆ ಫರಂಗಿಪೇಟೆ ಮತ್ತು ತುಂಬೆಯಲ್ಲಿ ಹಣ್ಣು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಸುಮಾರು 20 ಕಿಲೋ ಮೀಟರ್ ನಡೆದುಕೊಂಡು ಬಂದ ಕಾರ್ಮಿಕರು ಆದಾಗಲೇ ಸುಸ್ತಾಗಿದ್ದರು. ಆದರೂ ತಮ್ಮ ಪ್ರಯಾಣವನ್ನು ಮುಂದುವರಿಸಿಕೊಂಡು ಬಂಟರ ಭವನದ ಬಳಿಗೆ ರಾತ್ರಿ 2 ಗಂಟೆಯ ಸುಮಾರಿಗೆ ಬಂದ ಕಾರ್ಮಿಕರನ್ನು ಪೊಲೀಸರು ಮನವೊಲಿಸಿ ಕೊನೆಗೂ ಬಂಟರ ಭವನಕ್ಕೆ ತೆರಲುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆಯೂ ಕೆಲವು ಕಾರ್ಮಿಕರು ತಮ್ಮ ಪ್ರಯಾಣವನ್ನು ಮುಂದುವರಿಸಲು ಮುಂದಾದರು. ಅವರನ್ನು ಹರಸಾಹಸ ಪಟ್ಟು ಭವನಕ್ಕೆ ತೆರಳುವಂತೆ ಮಾಡಲಾಯಿತು.
ಬಂಟರ ಭವನದಲ್ಲಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ, ನಿಮ್ಮನ್ನು ಮೂರು ದಿನಗಳ ಬಳಿಕ ನಿಮ್ಮ ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯ ವರೆಗೆ ಇಲ್ಲಿಯೇ ತಂಗಿರಿ. ಊಟ, ತಿಂಡಿಯ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ಮನವೊಲಿಸಿದರು. ಈ ವೇಳೆಯೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬಂಟ್ವಾಳ ಬಂಟರ ಭವನದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು .
ಬಳಿಕ ಬುಧವಾರ ಬೆಳಿಗ್ಗೆ ಬಂಟರ ಭವನಕ್ಕೆ ಅಗಮಿಸಿದ ಶಾಸಕ ರಾಜೇಶ್ ನಾಯ್ಕ್ ವಲಸೆ ಕಾರ್ಮಿಕರ ಜೊತೆ ಮಾತನಾಡಿ ಭರವಸೆ ನೀಡಿದರು.
ನಿಮ್ಮನ್ನು ಗೌರವ ಪೂರಕವಾಗಿ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ ಎಂದು ಅವರು ಕಾರ್ಮಿಕ ರಿಗೆ ಧೈರ್ಯ ತುಂಬಿದರು.
ಬಂಟರ ಭವನ ದಲ್ಲಿ ತಂಗಿರುವ ಎಲ್ಲಾ ಕಾರ್ಮಿಕರಿಗೆ ವೈಯಕ್ತಿಕ ನೆಲೆಯಲ್ಲಿ ಊಟದ ವ್ಯವಸ್ಥೆ ಯನ್ನು ಒದಗಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here