ಇತ್ತೀಚೆಗೆ ತಾನೆ ಮಂಗಳೂರಿಗೆ ಆಗಮಿಸಿದ್ದ ಕಾಡು ಕೋಣವೊಂದನ್ನು ನಡೆಸಿಕೊಂಡ ರೀತಿ ಮತ್ತು ಅದರ ಅನಿರೀಕ್ಷಿತ ಸಾವಿನ ಸುತ್ತ ಗಿರಕಿ ಹೊಡೆದ ಸಂಶಯಿತ ಕಥೆಗಳು ರಾಜ್ಯಾದ್ಯಂತ ಸುದ್ದಿಯಾದದ್ದು ಇದೆಲ್ಲವನ್ನೂ ನಾವು ಕಣ್ಣಾರೆ ಕಂಡಂತೆ ಅನುಭವಿಸಿದ್ದೇವೆ, ಅತ್ತಿದ್ದೇವೆ, ಸುತ್ತಿದ್ದೇವೆ ಸಂಬಂಧಿತರಿಗೆ ಕುತ್ತಿದ್ದೇವೆ. ರಕ್ಕಸ ಗಣಗಳನ್ನ ಬೆಕ್ಕಸಗೊಳಿಸಿದ್ದೇವೆ, ಕೊನೆಗೆ ಅವರೆಲ್ಲರ ಪಾಷಂಡವಾದ ಬೆತ್ತಲಾಗಿಹೋಗಿದೆ. ಇದೆಲ್ಲ ಆಗಬೇಕಾದ್ದೆ. ಈ ಸಂದರ್ಭದಲ್ಲಿ ನನ್ನನೊಬ್ಬರು ಪ್ರಶ್ನಿಸಿದ್ದರು, ಸರ್ ಒಂದು ಕಾಡುಕೋಣ, ಒಂದು ಜಿಂಕೆ, ಒಂದು ಚಿರತೆ ಹೀಗೆ ವರ್ಷಕ್ಕೆ ಒಂದೋ ಎರಡೋ ಅಕ್ರಮವಾಗಿ ಸಾವಿಗೀಡಾದ್ರೆ, ಪರಿಸರ ಪ್ರೇಮಿಗಳು ರಾಜ್ಯಾದ್ಯಂತ ಈ ಕುರಿತು ಸುದ್ದಿ ಮಾಡುತ್ತಾರೆ. ಆದರೆ, ನಮ್ಮದೇ ಸಾವಿರಾರು ಗೋತಳಿಗಳನ್ನು ಬಲಾತ್ಕಾರವಾಗಿ ಚಿತ್ರಹಿಂಸೆ ಬರಿಸಿ ಕೊಂದಾಗ ನಮಗೆ ಏನೂ ಅನಿಸುವುದೇ ಇಲ್ವೆ? ಒಬ್ಬನೇ ಒಬ್ಬ ಪರಿಸರವಾದಿಯಾಗಲಿ ಅಥವಾ ಪ್ರಾಣಿದಯಾ ಸಂಘದವರಾಗಲೀ ಧ್ವನಿ ಎತ್ತಿದ್ದಾರೆಯೆ?

ಹೌದಲ್ಲ!? ಮೇಯಲು ಬಿಟ್ಟ, ಹಟ್ಟಿಯಲ್ಲಿ ಕಟ್ಟಿಹಾಕಿದ, ಗೋಶಾಲೆಯಲ್ಲಿ ಸಾಕಲ್ಪಡುವ ಜಾನುವಾರುಗಳನ್ನು ಕದ್ದುಮುಚ್ಚಿ ಕೆಲವು ಸಲ ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ಅವುಗಳನ್ನು ಕೊಚ್ಚಿಹಾಕುವಾಗಲೂ ನಮಗೆ ಏನೇನೂ ಅನಿಸುವುದಿಲ್ಲ ! ಏನು ದುರಂತವಿದು? ಹಾಗಾದರೆ ದಯೆ ಅನ್ನುವುದು ಮಿದುಳಿನ ಒಂದು ಭಾಗಕ್ಕೆ ಮಾತ್ರ ಸಂಬಂಧಿಸಿದ್ದೆ? ಕಾಡಿನ ಕೊಲೆ ಕಾಡುವಷ್ಟು ನಾಡಿನ ಕೊಲೆ ನಮ್ಮನ್ನು ಕಾಡುವುದೇ ಇಲ್ಲ!? ಕಾಡಿನಿಂದಲೇ ನಾಡು ಆಗಿರಬಹುದು, ಆದರೆ ನಾವು ನಾಡಲ್ಲೇ ಬದುಕುತ್ತಿದ್ದೇವಲ್ಲ? ಕಣ್ಣಿದ್ದೂ ಕುರುಡುತನ ಸರಿ ಅಲ್ಲ ತಾನೆ? ಕಾಡಿನ ಜೀವಂತಿಕೆಗೆ ಹೋರಾಟವೇನೋ ಸರಿಯೆ. ಆದರೆ ಕಣ್ಣಳತೆಯಲ್ಲೇ ನಡೆಯುವ ಕೊಲೆಗೆ ಸದ್ದಿಲ್ಲ, ಕೊಲೆಪಾತಕಿಗಳಿಗೆ ಗುದ್ದಿಲ್ಲ ಯಾಕೆ? One sided mind & one sided argument ಯಾವತ್ತೂ ಮೂರು ದಾರಿ ಸೇರುವಲ್ಲಿ ಬಹಿರಂಗವಾಗಿ ಗೋಮಾಂಸ ತಿನ್ನಿ ಎಂದು ಆರ್ಭಟಿಸುವ ಪೀತ ಮನಸ್ಸಿನ ಲಕ್ಷಣವಾಗುತ್ತೆ; ಯಾಕಂದ್ರೆ, ನಾವು ಮೌನವಹಿಸಿದೆವೆಂದಾದರೆ ನಮ್ಮ ಸಮರ್ಥನೆ ಎಂದೇ ಹೇಳಬೇಕಾಗುತ್ತೆ.

ಕಾಡು ಪ್ರಾಣಿಗಳದ್ದು ಮಾನವನಿಗೆ ಪರೋಕ್ಷ ಉಪಕಾರವಾದರೆ ಗೋಸಂಪತ್ತಿನದ್ದು ಪ್ರತ್ಯಕ್ಷ ಸಹಕಾರ. ಇಟ್ಟರೆ ಸಗಣಿಯಾದೆ……ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ….ಇದನ್ನೆಲ್ಲಾ ಮರೆಯುತ್ತಿದ್ದೇವಲ್ಲಾ….ಇದಕ್ಕೆ ಬೇಸರವಾಗುವುದು. ಹಸುಗಳು ನೀಡುವ ಒಂದೊಂದು ದ್ರವ್ಯಗಳೂ ಕೂಡಾ ಈ ಭೂಮಿಗೆ ಫಲವತ್ತತೆಯನ್ನು ನೀಡುವಲ್ಲಿ, ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ, ಸತ್ತ ನಂತರವೂ ತನ್ನ ಅಂಗಾಂಗಗಳಿಂದಲೂ ಬಹೂಪಯೋಗಿಯಾಗಿರುವ ಹಸು ಕಾಮಧೇನುವೇ ಸರಿ. ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಅನ್ನುವ ಈ ಬೇಡಿಕೆಯಲ್ಲೇ ಹಸುವಿನ ನೈಜತೆ ಅಡಕವಾಗಿದೆ. ಭಾರತೀಯವಾದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪಾರಿಸಾರಿಕವಾಗಿ ನೋಡುವಾಗಲೂ ಕೂಡ ಹಸು ಉನ್ನತ ಸ್ಥಾನದಲ್ಲಿ ನಿಲ್ಲುತ್ತೆ ಅನ್ನುವುದು ಸತ್ಯ.

ಆದರೆ, ಪೂಜೆ ಮಾಡಿ ಗರ್ಭಗುಡಿಗೆ ಬೀಗ ಜಡಿದು ನನಗೂ ದೇವರಿಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುವ ಮಾನವ ಹಸುವನ್ನೂ ಅದೇ ತಕ್ಕಡಿಯಲ್ಲಿ ತೂಕಮಾಡಿದ್ದಾನೆಯೆ? ಅನ್ನುವ ಸಂಶಯ. ಗೋಮಾತೆ ಗೋ ಸಂಪತ್ತು ಗರ್ಭಗುಡಿಗೆ ಮಾತ್ರ ಸೀಮಿತವಲ್ಲ ತಾನೆ? ಪಾರಿಸಾರಿಕ ಸಮತೋಲನದಲ್ಲಿ ಅವುಗಳದ್ದೂ ಪಾತ್ರವಿದೆ ಅನ್ನುವುದನ್ನು ನಾವು ಅರಿತುಕೊಳ್ಳಬೇಕಲ್ವೆ?
ಗೋ ತಳಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಂದಿನ ದೊಡ್ಡ ದುರಂತ. ಈ ರಾಜಕೀಯ ದುರಂಧರರಿದ್ದಾರಲ್ಲ! ಧಾರ್ಮಿಕ ನಾಯಕರು, ಪೀಠಾಧಿಪತಿಗಳು ಹಮ್ಮಿಕೊಳ್ಳುವ ಗೋ ಸಮ್ಮೇಳನ, ಗೋ ರಕ್ಷಾ ಆಂದೋಲನಗಳಲ್ಲಿ ಭಾಗವಹಿಸಿ ಭರವಸೆಯ ಮಾತನ್ನಾಡಿ, ಮತ್ತೆ ಅವನ್ನೆಲ್ಲ ಅಲ್ಲೇ ಕೊಡವಿಹಾಕಿ ಮತಬೇಟೆಯನ್ನೇ ಪರಮೋದ್ದೇಶವಾಗಿರಿಸಿಕೊಂಡು ತುಷ್ಟೀಕರಣ ರಾಜಕೀಯಕ್ಕಿಳಿಯುತ್ತಾರೆ. ಕುಲಗೆಟ್ಟ ರಾಜಕೀಯದಲ್ಲಿ ಇವರೆಲ್ಲ ಹಾಲಿಟ್ಟವನಿಗೇ ಕಚ್ಚುವ ಹಾವುಗಳಿದ್ದಂತೆ. ಏನೇ ಇರಲಿ, ಕಟುಕರ ಹಾಗೂ ಪರಿಸರ ವಿರೋಧಿ ಕಳ್ಳಕಾಕರು, ಕಳ್ಳಸಾಗಣೆದಾರರಿಂದ ಗೋಕುಲವನ್ನು ರಕ್ಷಿಸಲೇಬೇಕಾಗಿದೆ ಮಾತ್ರವಲ್ಲ ಅದೊಂದು ಆಂದೋಲನದ ಸ್ವರೂಪವನ್ನು ಪಡೆಯಬೇಕಾಗಿದೆ.

 

ರಾಜಮಣಿ ರಾಮಕುಂಜ
ನಿವೃತ್ತ ಉಪನ್ಯಾಸಕರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here