


ನವದೆಹಲಿ: ಲಾಕ್ಡೌನ್ 3.O ಕೊನೆಯ ವಾರಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಒಂದನೇ ಹಂತದ ಲಾಕ್ ಡೌನ್ ಮಾ. 24ರಂದು ಆರಂಭವಾದ ಬಳಿಕ ಸಿಎಂಗಳ ಜತೆ ಪ್ರಧಾನಿ ನಡೆಸುತ್ತಿರುವ ಐದನೇ ಸಭೆ ಇದು.
ಮೇ 17ರ ಅನಂತರ ಲಾಕ್ಡೌನ್ ಸಂಪೂರ್ಣವಾಗಿ ತೆರವು ಮಾಡಬೇಕಾದರೆ ಕೈಗೊಳ್ಳಬೇಕಾದ ನಿರ್ಧಾರಗಳು ಮತ್ತು ಅಳವಡಿಸಿಕೊಳ್ಳಬೇಕಾದ ಮಾರ್ಗಸೂಚಿಗಳು ಅಥವಾ ಲಾಕ್ಡೌನ್ ಮುಂದುವರೆದರೆ ದೇಶದ ಆರ್ಥಿಕತೆಗೆ ಪೂರಕವಾಗಿ ಸಡಿಲಿಸಬೇಕಿರುವ ನಿರ್ಬಂಧಗಳು, ಕಂಟೈನ್ಮೆಂಟ್ ವಲಯಗಳ ನಿರ್ವಹಣೆ ಮತ್ತು ಕೆಂಪು ವಲಯಗಳಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳು, ವಲಸೆ ಕಾರ್ಮಿಕರ ಸುರಕ್ಷಿತ ಪ್ರಯಾಣ, ವಿದೇಶದಿಂದ ಕರೆತರಲಾಗುತ್ತಿರುವ ಭಾರತೀಯರ ವಿಚಾರಗಳು ಇಂದಿನ ಸಭೆಯಲ್ಲಿ ಚರ್ಚೆಯಾಗಲಿವೆ ಎಂಬ ಮಾಹಿತಿ ಇದೆ.
ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಎಲ್ಲ ರಾಜ್ಯ ಸರಕಾರಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ರವಿವಾರ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ರಾಜ್ಯ ಸರಕಾರಗಳ ಹಿರಿಯ ಅಧಿಕಾರಿಗಳ ಜತೆಗೆ ಎರಡು ಬಾರಿ ಸಭೆ ನಡೆಸಲಾಗಿದ್ದು, ಈ ಸಂದರ್ಭ ಅವರೆಲ್ಲ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಮೇ 17ರ ಅನಂತರ ಕೋವಿಡ್ -19 ನಿಯಂತ್ರಣ ಮತ್ತು ಆರ್ಥಿಕ ಪುನಶ್ಚೇತನ – ಈ ಎರಡೂ ವಿಚಾರಗಳನ್ನು ಸರಿದೂಗಿಸಿಕೊಂಡು ಹೋಗುವಂಥ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಹೆಚ್ಚಿನ ರಾಜ್ಯಗಳು ಒಲವು ತೋರಿವೆ ಎನ್ನಲಾಗಿದೆ. ಕೆಂಪು ವಲಯಗಳನ್ನು ಕೇಂದ್ರ ಸರಕಾರವೇ ಗುರುತಿಸಬೇಕು. ಆ ವಲಯ ಬಿಟ್ಟು ಉಳಿದ ಎಲ್ಲಾ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುವಂಥ ಮಾರ್ಗಸೂಚಿ ನೀಡಬೇಕು ಎಂಬ ನಿರ್ಧಾರಕ್ಕೆ ವಿವಿಧ ರಾಜ್ಯ ಸರಕಾರಗಳು ಬಂದಿವೆ ಎನ್ನಲಾಗಿದೆ. ಸೋಂಕು ತೀವ್ರವಾಗಿರುವ ರಾಜ್ಯಗಳಿಗೆ ಕೇಂದ್ರ ತಂಡ ಕಳುಹಿಸುವ ಕುರಿತು ನಿರ್ಧಾರ ಹೊರಬೀಳಲಿದೆ.
ಜನ ಹೆಚ್ಚು ಸೇರಲು ಕಾರಣವಾಗುವಂಥ ಚಟುವಟಿಕೆಗಳಾದ ಸಿನೆಮಾ ಹಾಲ್, ಮಾಲ್ಗಳು, ಜಾತ್ರೆಗಳು, ಸಂಘ-ಸಂಸ್ಥೆಗಳ ಸಮಾರಂಭಗಳು, ಖಾಸಗಿ ಸಮಾರಂಭಗಳ ಮೇಲಿನ ನಿರ್ಬಂಧಗಳನ್ನು ಮುಂದುವರಿಸುವ ಬಗ್ಗೆ ಎಲ್ಲ ರಾಜ್ಯ ಸರಕಾರಗಳು ಒಲವು ತೋರಿವೆ. ರಮ್ಜಾನ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ ಎಂದು ತೆಲಂಗಾಣ ಸರಕಾರ ಈಗಾಗಲೇ ಪ್ರಕಟಿಸಿದೆ. ಇಂಥ ನಿರ್ಧಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಬಹುದು ಎಂಬ ಮಾಹಿತಿಗಳು ಇವೆ.





