


ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 4000 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗಿನ ಕೇಸ್ ಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಸಂಖ್ಯೆ ಇದು. ಸದ್ಯ ಸೋಂಕಿತರ ಸಂಖ್ಯೆ 67,152ಕ್ಕೆ ಏರಿದ್ದು, ಅದರಲ್ಲಿ ಸಕ್ರಿಯ ಪ್ರಕರಣಗಳು 44,029. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು 20,916. ಸಾವಿನ ಸಂಖ್ಯೆ 2,206ಕ್ಕೆ ಏರಿದೆ ಎಂದು ಇಂದು ಬೆಳಗ್ಗೆ ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿದೆ. ಒಂದೆಡೆ ಹೆಚ್ಚಿನ ಪ್ರದೇಶದಲ್ಲಿ ಲಾಕ್ ಡೌನ್ ಸಡಿಲಿಕೆ ಆಗಿದ್ದರಿಂದ ಜನರ ಸಂಚಾರವೂ ಸಹಜ ಸ್ಥಿತಿಗೆ ಬಂದಿವೆ. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುತ್ತಿರುವುದು, ಸಾಮಾನ್ಯ ಜನರ ಸಹಜ ಓಡಾಟ. ಇನ್ನೊಂದೆಡೆ ಸತತವಾಗಿ ಏರಿಕೆಯಾಗುತ್ತಲೇ ಇರುವ ಕೊರೋನಾ ಸೋಂಕಿನ ಪ್ರಮಾಣ. ಮೇ 17ರವರೆಗೆ ಲಾಕ್ಡೌನ್ ಇದ್ದು, ಅದಾದ ಬಳಿಕ ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಈ ವಿಷಯದ ಬಗ್ಗೆ ತೀರ್ಮಾನಿಸಲು ಪ್ರಧಾನಿ ಮೋದಿ ಇಂದು ಮಧ್ಯಾಹ್ನ 3 ಗಂಟೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸುವ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.





