ಬಂಟ್ವಾಳ: ಎಲ್ಲಿಯ ಕರೋಪಾಡಿ..ಎಲ್ಲಿಯ ಉಡುಪಿ..? ಆದರೆ ಕೊರೋನಾ ಕಾರಣಕ್ಕೆ  ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಕುಟುಂಬವೊಂದಕ್ಕೆ ನೆರವಾಗಲು ಉಡುಪಿಯ ಕೊರೋನಾ ವಾರಿಯರ್ಸ್ ಬರಬೇಕಾಯ್ತು..
ಹೌದು..ಇದು  ದೂರವಾಣಿ ಕರೆಯೊಂದಕ್ಕೆ ಸ್ಪಂದಿಸಿ
ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಕೊರೋನಾ ವಾರಿಯರ್ಸ್  ತಂಡ  ಬಂಟ್ವಾಳ ತಾಲೂಕಿನ ಕರೋಪಾಡಿಗೆ ಆಗಮಿಸಿ, ಸಾಹಸದೊಂದಿಗೆ ಮಾನವೀಯತೆ ಮೆರೆದ ಘಟನೆಯಿದು..
ಏನಾಯ್ತು..
ಉಡುಪಿಯ ಕೊರೋನಾ ವಾರಿಯರ್ಸ್ ತಂಡ ಸಿದ್ಧಪಡಿಸಿರುವ ಆಡಿಯೋ ಕ್ಲಿಪ್  ವ್ಯವಸ್ಥೆಯಿಂದ ಈ ಸಂವಹನ ಸಾಧ್ಯವಾಗಿದ್ದು, ಆಹಾರದ ಸಮಸ್ಯೆ ಎದುರಿಸುತ್ತಿದ್ದ  ಅಸ್ಸಾಂ ಮೂಲದ ವಲಸೆ ಕಾರ್ಮಿಕ ಕುಟುಂಬವೊಂದರ ಹಸಿವು ನೀಗಿದೆ.  ಉಡುಪಿಯ ವಾರ್ತಾ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಮಾರ್ಗದರ್ಶನ ದಲ್ಲಿ ಈ ತಂಡ ಮಾದರಿ ಕಾರ್ಯ ನಡೆಸುತ್ತಿದ್ದು, ಜನಮೆಚ್ಚುಗೆಗೆ ಪಾತ್ರವಾಗುತ್ತಿದೆ.


ತಾಲೂಕಿನ ಗಡಿ-ಕರೋಪಾಡಿ
ಕರೋಪಾಡಿ ಕೇರಳದ ಗಡಿ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಭಾರೀ ಬಂದೋಬಸ್ತ್ ಒದಗಿಸಲಾಗಿದೆ.  ಕೇರಳದಿಂದ ಕರ್ನಾಟಕ ಪ್ರವೇಶಿಸುವ ಎಲ್ಲಾ ಮುಖ್ಯ ರಸ್ತೆಗಳನ್ನು ಬಂದ್ ಮಾಡಿರುವ ಕಾರಣ ಗ್ರಾಮೀಣ ಪ್ರದೇಶದ ಹಲವೆಡೆಗಳಲ್ಲಿ ಸ್ಥಳೀಯವಾಗಿ ಸಮಸ್ಯೆ ಎದುರಾಗಿದೆ. ಈ ಪೈಕಿ ಕರೋಪಾಡಿ ಯಲ್ಲಿ ವಾಸ್ತವ್ಯವಿದ್ದ  ಅಸ್ಸಾಂ ಮೂಲದ ವಲಸೆ ಕಾರ್ಮಿಕ ಕುಟುಂಬವೊಂದು ಕೆಲದಿನಗಳಿಂದ ಆಹಾರದ ಸಮಸ್ಯೆ ಎದುರಿಸುತ್ತಿತ್ತು.
ಉಡುಪಿಯ ಕೊರೋನಾ ವಾರಿಯರ್ಸ್ ತಂಡ ಸಿದ್ಧಪಡಿಸಿದ ಆಡಿಯೋ ಕ್ಲಿಪ್ ನಲ್ಲಿ 23ಭಾಷೆಯಲ್ಲಿ ಮನೆಯೊಳಗೇ ಇರಿ, ಸುರಕ್ಷಿತವಾಗಿರಿ ಎಂಬ ಸಂದೇಶವಿದ್ದು, ಇದರಲ್ಲಿ  ಅಸ್ಸಾಂ ಭಾಷೆಯೂ ಇತ್ತು. ಹೀಗಾಗಿ ಈ ಕುಟುಂಬ ಉಡುಪಿಯ ಕೊರೋನಾ ವಾರಿಯರ್ಸ್ ತಂಡವನ್ನು ಸಂಪರ್ಕಿಸಿತ್ತು.
ಉಡುಪಿಯಿಂದ ಬಂತು ತಂಡ..
ದೂರವಾಣಿ ಕರೆಯ ಹಿನ್ನೆಲೆಯಲ್ಲಿ ಉಡುಪಿಯಿಂದ ಬಂದ ಕೊರೋನಾ ವಾರಿಯರ್ಸ್ ತಂಡದ ಮುಖ್ಯಸ್ಥರಾದ ಕು.ಸಹನಾ, ಸುಕೇತ್ ಶೆಟ್ಟಿ, ದೀಪಕ್ ಶೆಣೈ ಯವರು ಸಾಹಸದೊಂದಿಗೆ  ಮಾನವೀಯತೆ ಮೆರೆದರು. ಇವರ ಜೊತೆ ಮಂಗಳೂರಿನ ಪುನೀತ್ ರಾಜ್ ಕೊಟ್ಟಾರಿ, ಲೋಹಿತ್ ಪನೋಲಿಬೈಲ್,ಚಂದ್ರಹಾಸ ಕನ್ಯಾನ , ಗುರುರಾಜ್ ಬಂಟ್ವಾಳರವರೂ ಸಾಥ್ ನೀಡಿದರು.  ಉಡುಪಿಯಿಂದ ಕರೋಪಾಡಿ ಗೆ ಬಂದ ತಂಡ ಪಂಬತ್ತಾಜೆ ಭೇಟಿ ನೀಡುವುದು ಅಸಾಧ್ಯವಾಗಿತ್ತು. ರಸ್ತೆ ಅಗೆದು ಹಾಕಿದ್ದ ಹಿನ್ನೆಲೆಯಲ್ಲಿ ಸುಮಾರು 2 ಕಿ.ಮೀ.ನಷ್ಟು ಕಾಲ್ನಡಿಗೆಯಲ್ಲೇ ಸಾಗಿ ಮನೆ ತಲುಪಬೇಕಾಯಿತು. ಉಡುಪಿಯಿಂದ   ಕರೋಪಾಡಿಯ ಪಂಬತ್ತಾಜೆ ವರೆಗೆ ಸುಮಾರು 110 ಕಿ.ಮೀ(ಏಕಮುಖ) ಸಂಚರಿಸಿದ ತಂಡ ಅಸ್ಸಾಂ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ಉಚಿತವಾಗಿ ನೀಡಿ,ಸಂತೃಪ್ತ ಭಾವನೆಯೊಂದಿಗೆ ಮರಳಿದರು.
……..
ಕೊರೋನಾ ಸಂಕಷ್ಟಕ್ಕೆ  ಸ್ಪಂದಿಸಲು ನಮ್ಮ ಕೊರೋನಾ ವಾರಿಯರ್ಸ್ ತಂಡ  ಸದಾ ಸಿದ್ಧವಾಗಿದೆ.ಈವರೆಗೆ 200ಕ್ಕೂ ಅಧಿಕ ಮಂದಿಯನ್ನು ತುರ್ತು ಸಂದರ್ಭದಲ್ಲಿ ರಕ್ಷಿಸಿದ್ದೇವೆ. ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರ ಮಾರ್ಗದರ್ಶನದಲ್ಲಿ ನಮ್ಮ ಕಾರ್ಯಾಚರಣೆ ನಡೆಯುತ್ತಿದೆ.
ದೀಪಕ್ ಶೆಣೈ
ಮುಖ್ಯಸ್ಥರು
ಉಡುಪಿ ಕೊರೋನಾ ವಾರಿಯರ್ಸ್
………..

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here