ಯಾರು ಏನೇ ಹೇಳಲಿ, ಇನ್ನು ಮುಂದಕ್ಕೆ ಕೊರೊನದೊಂದಿಗಿನ ನಮ್ಮ ಹೋರಾಟ ಅದು ಜೀವನ ಪರ್ಯಂತ ಇದ್ದದ್ದೆ; ಆ ಮಲೇರಿಯಾ, ಡೆಂಗ್ಯೂ, ಚಿಕುನ್ಗುನ್ಯಾ ಇತ್ಯಾದಿಗಳಿವೆಯಲ್ಲ? ಹಾಗೆ. ಆದರೆ ಈಗಿನ ಸ್ವರೂಪದಲ್ಲಿ ಇರದೆ ಬದಲಾದ ಇನ್ನೊಂದು ರೂಪದಲ್ಲಿ ಅದು ನಮ್ಮನ್ನು ಬಾಧಿಸುತ್ತಿರಬಹುದು, ಅದರ ವಿರುದ್ಧದ ನಮ್ಮ ಹೋರಾಟ ಕೂಡ ಬೇರೆಯೇ ಒಂದು ನಿರ್ದಿಷ್ಟ ಸ್ವರೂಪದಲ್ಲಿರಬಹುದು.
ನನಗನಿಸುತ್ತೆ, ಪ್ರಾಕೃತಿಕವಾಗಿ ಉಂಟಾದ ವೈರಸ್ ಇದು ಆಗಿದ್ದಲ್ಲಿ ಪ್ರಕೃತಿಯೊಂದಿಗೆ ನಮ್ಮ ಬದುಕನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತೆ, ಅಂದರೆ, ಬದುಕಿನ ಶೈಲಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಫಾಸ್ಟ್ ಫುಡ್ ಸಂಸ್ಕೃತಿ, ಅಥವಾ ಇನ್ನೂ ಹೇಳಬೇಕಾದಲ್ಲಿ ಬದುಕಿನ ವಿದೇಶೀಕರಣ ಇದು ಬದಲಾಗಬೇಕು. ಇವತ್ತು ಏನಾದರೂ ಭಾರತ ಕೊರೊನ ವೈರಸ್ಸಿನ ಜಾಡ್ಯದಿಂದ ತುಲನಾತ್ಮಕವಾಗಿ ಸ್ವಲ್ಪ ಸುಧಾರಿಸಿಕೊಂಡಿದ್ದರೆ ಅದಕ್ಕೆ ಕಾರಣ ಭಾರತೀಯರಾದ ನಮ್ಮ ಬದುಕಿನ ಶೈಲಿ ಹಾಗೂ ಆಹಾರ ಪದ್ಧತಿಯೇ ಕಾರಣವಾಗಿದೆ. ಇದನ್ನ ನಾವು ಮನಸ್ಸಿನಲ್ಲಿ ಇಟ್ಟುಕೊಂಡು ಪ್ರಕೃತಿದತ್ತ ಆಹಾರಕ್ಕೆ ತೆರಳಿದೆವಾದರೆ, ಯಾವ ವೈರಸ್ಸನ್ನಾದರೂ ಎದುರಿಸುವ ಸಾಮರ್ಥ್ಯ ನಮ್ಮ ದೇಹಕ್ಕೆ ಬಂದುಬಿಡುತ್ತೆ; ಪ್ರಕೃತಿದತ್ತ ಆಹಾರಕ್ಕೆ ಯಾವತ್ತೂ ಕೂಡ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವ ಕೆಲವು ಸಲ ಉಂಟುಮಾಡುವ ಸಾಮರ್ಥ್ಯವಿರುತ್ತೆ. ಈಗ ನಾವು ಎಚ್ಚತ್ತುಕೊಳ್ಳಲು ಕ್ಲಪ್ತ ಸಮಯ.ಇಂತಹ ಸಂದರ್ಭಗಳಲ್ಲಿ ನಾವು ಪಶ್ಚಿಮ ಘಟ್ಟಗಳಲ್ಲಿ ಇರುವ ಲಕ್ಷಾಂತರ ಗಿಡಮೂಲಿಕೆಗಳನ್ನ ಉಳಿಸಿಕೊಳ್ಳಬೇಕಾಗಿದೆ. ಅಭಿವೃದ್ಧಿಯ ನೆಪವೊಡ್ಡಿ ರೆಸಾರ್ಟ್ಸ್, ಗಣಿಗಾರಿಕೆ, ಅರಣ್ಯ ಒತ್ತುವರಿ, ಜಲವಿದ್ಯುತ್ ಯೋಜನೆ, ಎಸ್ಟೇಟ್ಸ್, ಸುರಕ್ಷಿತವಲ್ಲದ ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳು ಮೊದಲಾದವುಗಳಿಂದ ಪ್ರಕೃತಿಯನ್ನು ದೋಚುವ, ವಿಕೃತಿಗೊಳಿಸುವ ಕೆಟ್ಟ ಕೆಲಸವನ್ನು ಇನ್ನಾದರೂ ತಹಬಂದಿಗೆ ತರಲೇಬೇಕಾಗಿದೆ. ಇನ್ನೂ ಕಾಲ ಮಿಂಚಿಲ್ಲ, ಸಹ್ಯ ಪರಿಸರವೇ ನಮ್ಮ ಧ್ಯೇಯವಾಗಲಿ.
ಇನ್ನೊಂದು ವಿಚಾರವೆಂದರೆ, ಈ ವೈರಸ್ ಮನುಷ್ಯನಿಂದಲೇ ಉತ್ಪತ್ತಿಯಾಗಿದ್ದಲ್ಲಿ ಇದಕ್ಕೆ ನಾಶವಿಲ್ಲ, ಇದರ ವಿರುದ್ಧ ನಮ್ಮ ಹೋರಾಟ ನಿರಂತರ. ಒಬ್ಬೊಬ್ಬ ವ್ಯಕ್ತಿಯನ್ನೂ ಈ ವೈರಸ್ ಆಕ್ರಮಿಸುತ್ತಾ ಹೋದಂತೆ, ಆಯಾ ದೇಹ ಪ್ರಕೃತಿಗೆ ಅನುಗುಣವಾಗಿ ಈ ವೈರಸ್ಸಿನ ಕಾರ್ಯ ಚಟುವಟಿಕೆಗಳು ಇರುತ್ತವೆ, ಅದಕ್ಕನುಗುಣವಾಗಿ ಆ ವೈರಸ್ ಸ್ವರೂಪ ಬದಲಾಯಿಸುತ್ತಿರುತ್ತೆ, ಅಂದರೆ, ತನ್ನ ಮೇಲೆ ಪ್ರಯೋಗವಾಗಬಹುದಾದ ಯಾವುದೇ ಪ್ರತೀಕಾರವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುತ್ತಾ ಇರುತ್ತದೆ. ಇದು ನಿರಂತರ ನಡೆಯುವ ಪ್ರಕ್ರಿಯೆ. ಈ ನೆಲೆಯಿಂದ ಅದರೊಂದಿಗಿನ ನಮ್ಮ ಹೋರಾಟ ಅದು ನಿರಂತರ. ಇದು ಕೊರೊನ ನಮಗೆ ಕಲಿಸಿದ ಪಾಠ. ಈಗಲಾದರೂ ನಾವು ನಮ್ಮ ತನವನ್ನು ಇಟ್ಟುಕೊಂಡು, Nature is the guide, the nurse and the parent ಅನ್ನುವ ದೃಢ ನಿರ್ಧಾರದೊಂದಿಗೆ ಪ್ರಕೃತಿಗೆ ಅನುಗುಣವಾದ ಬದುಕನ್ನು ರೂಢಿಸಿಕೊಂಡೆವಾದರೆ ನಮ್ಮ ಜೀವನ ಹಸನು, ಇಲ್ಲವಾದಲ್ಲಿ ಮಸಣ.

ರಾಜಮಣಿ ರಾಮಕುಂಜ, 
ನಿವೃತ್ತ ಉಪನ್ಯಾಸಕ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here