Wednesday, October 18, 2023

ಅವರನ್ನು ಮಂಗಳೂರಿನಿಂದ ಗೌರವಯುತವಾಗಿ ಕಳುಹಿಸಿಕೊಡಬೇಕಿತ್ತು..!

Must read

 

ಕೊರೋನ ವಿರುದ್ದದ ಹೋರಾಟದಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದರೂ ಅಲ್ಲಲ್ಲಿ ಸಣ್ಣದಾಗಿ ಸಡಿಲಗೊಂಡ ಪರಿಸ್ಥಿತಿಯ ಮಧ್ಯೆಯೇ ಜನರು ಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದಾರೆ. ಹೀಗಿರುವಾಗಲೇ ಲಾಕ್ ಡೌನ್ ಗೆ ಮುನ್ನ ತಮ್ಮ ತಮ್ಮ ಊರುಗಳಿಂದ ದೂರವಾಗಿ ಮತ್ತೆಲ್ಲೋ ಬಂಧಿಯಾಗಿದ್ದವರನ್ನು ಮತ್ತೆ ಊರಿಗೆ ಕಳುಹಿಸೋ ಪ್ರಯತ್ನ ಸಾಗಿದೆ. ಹೀಗೆ ಊರು ಬಿಟ್ಟು ಸಂಕಷ್ಟದ ಬದುಕು ಕಟ್ಟಿಕೊಂಡಿರೋರಲ್ಲಿ ಹೊರ ರಾಜ್ಯದ ಕಾರ್ಮಿಕರ ಸಂಖ್ಯೆ ದೊಡ್ಡದು.

ಕರಾವಳಿಗರು ಉದ್ಯೋಗಕ್ಕಾಗಿ ವಿದೇಶದಲ್ಲಿ ಬದುಕು ಕಟ್ಟಿಕೊಂಡಂತೆ ಬಿಹಾರ, ಉತ್ತರ ಪ್ರದೇಶ, ಝಾರ್ಖಂಡ್ ಸೇರಿ ಹಲವು ರಾಜ್ಯದ ಕಾರ್ಮಿಕರು ದೇಶದ ಬೇರೆ ಬೇರೆ ಭಾಗಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಉದ್ಯೋಗ ಹರಸಿ ಬಂದ ಅವರಿಗೂ ಅವರ ಊರುಗಳಲ್ಲಿ ಕುಟುಂಬಗಳಿವೆ, ಭಾವನಾತ್ಮಕ ನಂಟಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಶ್ರಮಿಕ್ ರೈಲುಗಳ ಮೂಲಕ ಅವರುಗಳನ್ನು ಊರು ಸೇರಿಸೋ ಕೆಲಸ ಮಾಡುತ್ತಿದೆ. ಆದ್ರೆ ಈ ವಿಚಾರದಲ್ಲಿ ಮಂಗಳೂರಿನ ರಾಜಕಾರಣಿಗಳು ಮಾತ್ರ ಅದ್ಯಾಕೋ ಹಿಂದೆ ಬಿದ್ದಿದ್ದಾರೆ ಅಂತ ಅನಿಸದೇ ಇರದು. ಹಾಗೆ ನೋಡಿದರೆ, ಇಂದು ಕಡಲ ತಡಿಯಲ್ಲಿ ಎದ್ದು ನಿಂತಿರುವ ಅದೆಷ್ಟೋ ಬಹುಮಹಡಿ ಕಟ್ಟಡಗಳ ಹಿಂದೆ ಈ ಹೊರ ರಾಜ್ಯದ ಕಾರ್ಮಿಕರ ಶ್ರಮವಿದೆ. ಅಭಿವೃದ್ಧಿಯಲ್ಲಿ ವೇಗವಾಗಿ ಸಾಗುತ್ತಿರೋ ಕರಾವಳಿಯ ಅಂದ, ಚೆಂದದ ಹಿಂದೆ ಯುಪಿ, ಬಿಹಾರದ ಬಯ್ಯಾಗಳೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದ್ದಾರೆ. ಇಂದು ಇಡೀ ರಾಜ್ಯದಲ್ಲೇ ಮಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರ ಜಿಗಿತುಕೊಂಡು ನಿಂತಿರೋದ್ರ ಹಿಂದೆಯೂ ಇದೇ ಬಯ್ಯಾಗಳ ಬೆವರಿನ ಶ್ರಮವಂತೂ ಇದ್ದೇ ಇದೆ. ಇದೇ ಕಾರಣಕ್ಕೆ ಮಂಗಳೂರಿನ ಬಿಲ್ಡರ್ ಗಳಿಗೆ, ಗುತ್ತಿಗೆದಾರರಿಗೆ ಬೇಕಾಗಿರೋದು ಇದೇ ಯುಪಿ, ಬಿಹಾರ ಮೂಲದ ಕಾರ್ಮಿಕರು. ಕಡಿಮೆ ವೇತನಕ್ಕೆ ಹೆಚ್ಚಿನ ಶ್ರಮದಿಂದ ದುಡಿಯೋ ಇದೇ ಬಯ್ಯಾಗಳು. ಇನ್ನು ಸದ್ಯ ಜಿಲ್ಲಾಡಳಿತವೇ ಕೊಟ್ಟಿರೋ ಲೆಕ್ಕಾಚಾರಕ್ಕೆ ಬಂದ್ರೆ ತಮ್ಮ ಊರಿಗೆ ಹೋಗಲು ರಿಜಿಸ್ಟರ್ ಮಾಡಿಕೊಂಡಿರೋ ಹೊರ ರಾಜ್ಯದ ಕಾರ್ಮಿಕರ ಸಂಖ್ಯೆ ಬರೋಬ್ಬರಿ 20 ಸಾವಿರ. ಇದರಲ್ಲಿ 5 ಸಾವಿರ ಝಾರ್ಖಂಡ್, 4 ಸಾವಿರ ಬಿಹಾರ, 3 ಸಾವಿರ ಉತ್ತರ ಪ್ರದೇಶ ಸೇರಿ ಬೇರೆ ರಾಜ್ಯದ ಕಾರ್ಮಿಕರಿದ್ದಾರೆ. ಆದ್ರೆ ಕಳೆದ ನಾಲ್ಕೈದು ದಿನಗಳಿಂದ ಇವರೆಲ್ಲಾ ಡಿಸಿ ಕಚೇರಿ,‌ ಮಂಗಳೂರು ಪಾಲಿಕೆ, ತಹಶಿಲ್ದಾರ್, ಎಸಿ ಕಚೇರಿ ಅಂತ ಅಲೆಯುತ್ತಲೇ ಇದ್ದಾರೆ. ನೋಂದಣಿ ಆಗಿದ್ದರೂ ಇವರಿಗೆ ಊರು ತಲುಪಲು ರೈಲು ಸಿಕ್ಕಿಲ್ಲ. ಕಳೆದ ಅದೆಷ್ಟೋ ವರ್ಷಗಳಿಂದ ನಮ್ಮಗಳ ನಡುವೆ ಬಯ್ಯಾಗಳಾಗಿ ಜೊತೆಗಿದ್ದವರು, ನಾವು ಬದುಕು ಕಟ್ಟಿಕೊಂಡಿರೋ ಸುಂದರ ಮಂಗಳೂರಿನ ಹಿಂದೆ ಈ ಕಾರ್ಮಿಕರ ಶ್ರಮವೂ ಇದೆ. ಲೆಕ್ಕಕ್ಕೆ 20 ಸಾವಿರವಷ್ಟೇ ಇದ್ದರೂ ಲೆಕ್ಕಕ್ಕೆ ಸಿಗದ ಇನ್ನೂ ಸಾವಿರ ಇರಬಹುದು. ಆದ್ರೆ ಸರ್ಕಾರಗಳು ಬಿಲ್ಡರ್ ಗಳದ್ದೋ ಅಥವಾ ಇನ್ಯಾರದ್ದೋ ಲಾಬಿಗೆ ಮಣಿಯಬಾರದು. ಅವರುಗಳನ್ನು ಮರ್ಯಾದೆಯಿಂದ ಗೌರವದಿಂದ ಅವರ ಊರುಗಳಿಗೆ ತಲುಪಿಸೋ ಕೆಲಸವಾಗಬೇಕು. ಈ ಕಾರ್ಮಿಕರು ಹೋದರೆ ಮಂಗಳೂರಿನಲ್ಲಿ ಕಟ್ಟಡ ಕಾಮಗಾರಿಗಳು ನಿಂತು ಬಿಡುತ್ತೆ ಅನ್ನೋ ಆತಂಕ ಬಿಲ್ಡರ್ ಗಳಲ್ಲಿರಬಹುದು. ಇದೇ ಕಾರಣಕ್ಕೆ ಅವರುಗಳ ಪ್ರಯಾಣಕ್ಕೆ ತಡೆ ಬಿದ್ದಿರಲೂ ಬಹುದು. ಹಾಗಂತ ಈ ಕಾರ್ಮಿಕರು ರೈಲು ನಿಲ್ದಾಣದಲ್ಲೋ ಮತ್ಯಾವ ರಸ್ತೆಯಲ್ಲೋ ಗುಂಪು ಸೇರಿ ಪ್ರತಿಭಟಿಸಿ ನೋವು ತೋಡಿಕೊಳ್ಳುವ ಸ್ಥಿತಿಗೆ ತಲುಪಿಸೋದು ಅಕ್ಷಮ್ಯ…! ಅವರಿಗೂ ಕಾಯುವ ಅಮ್ಮ, ಮುದ್ದಿನ ಮಕ್ಕಳು, ಪ್ರೀತಿಯ ಹೆಂಡತಿ, ತಂಗಿ…ಹೀಗೆ ಭಾವನಾತ್ಮಕ ‌ನಂಟುಗಳು ಇರಲ್ವಾ..? ಇನ್ನಾದರೂ ಇವರನ್ನು ಗೌರವದಿಂದ ಕಳುಹಿಸಿ ಕೊಡಿ…ಹೋದವರು ಮತ್ತೆ ಇಲ್ಲಿಗೆ ಬರಬೇಕು, ನಮ್ಮಗಳ ಮಧ್ಯೆ ಬಯ್ಯಾಗಳಾಗಿಯೇ ಇರಬೇಕು… ಮತ್ತೆ ಬರದೇ ಹೋದರೆ ಅದು ನಮ್ಮ ಮಂಗಳೂರಿನ ‌ಅಭಿವೃದ್ದಿ, ವ್ಯವಹಾರ, ರಿಯಲ್ ಎಸ್ಟೇಟ್ ಎಲ್ಲದಕ್ಕೂ ಏಟು ಕೊಟ್ಟರೂ ಅನುಮಾನವೇ ಇಲ್ಲ…..

ಭರತ್ ರಾಜ್

……………………………………..

…………………………………………

More articles

Latest article