



ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು ಗೂಡ್ಸ್ ರೈಲ್ ಹರಿದ ಪರಿಣಾಮ 17 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಜುಲಾನದಲ್ಲಿರುವ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ವಲಯದಲ್ಲಿ ಇವರು ಕೆಲಸ ಮಾಡುತ್ತಿದ್ದು ಲಾಕ್ಡೌನ್ ನಡುವೆ ಊರಿಗೆ ಹೋಗಲು ಸಜ್ಜಾಗಿದ್ದರು. ರೈಲು ಹಳಿಗಳ ಮೇಲೆ ನಡೆದು ಹೋಗುತ್ತಿದ್ದ ಕಾರ್ಮಿಕರು ಮಹಾರಾಷ್ಟ್ರದ ಕಾರ್ಮಾಡ್ ಬಳಿ ರೈಲು ಹಳಿಗಳ ಮೇಲೆ ಮಲಗಿದ್ದರು. ಇಂದು ಬೆಳಗ್ಗೆ 5:15ರ ಸುಮಾರಿಗೆ ಮಲಗಿದ್ದವರ ಮೇಲೆ ರೈಲು ಹರಿದಿದೆ. ಘಟನೆ ನಡೆದ ಸ್ಥಳಕ್ಕೂ ಮುಂಬೈಗೂ 360 ಕಿ.ಮೀ ಅಂತರವಿದೆ.
ವಲಸೆ ಕಾರ್ಮಿಕರಲ್ಲಿ ತುಂಬಾ ತುರ್ತಿನ ಅವಶ್ಯ ಇರುವವರಿಗಾಗಿಯೇ ಅನೇಕ ರಾಜ್ಯಗಳು ವಿಶೇಷ ಶ್ರಮಿಕ್ ಎಕ್ಸ್ಪ್ರೆಸ್ ರೈಲಿನ ಮೂಲಕ ತವರಿಗೆ ಕರೆಸಿಕೊಳ್ಳುತ್ತಿವೆ. ಆದರೆ, ಕೆಲವರು ಕಾಲ್ನಡಿಗೆಯಲ್ಲೇ ತವರಿಗೆ ಮರಳುವ ನಿರ್ಧಾರ ಮಾಡಿ ಅನೇಕ ದಿನಗಳಿಂದ ನಡೆದುಕೊಂಡೇ ಸಾಗುತ್ತಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ ಮತ್ತು ಪೊಲೀಸ್ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದೆ ಎಂದು ಸೌಥ್ ಸೆಂಟ್ರಲ್ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.






