ಕೊವಿಡ್ 19 ಕೊರೊನೊ ವೈರಸ್ ಜಗತ್ತನ್ನೇ ಆವರಿಸಿರುವ ಒಂದು ಹೆಮ್ಮಾರಿಯೇ ಸರಿ. ಆಶ್ಚರ್ಯವೆಂದರೆ ಅದರ ಜಾಡನ್ನು ಹಿಡಿಯಲು ಯಾರಿಂದಲೂ ಇನ್ನೂ ಸಾಧ್ಯವಾಗಿಲ್ಲ. ಕೂತಲ್ಲಿ ನಿಂತಲ್ಲಿ ಹೊಕ್ಕಲ್ಲಿ ಹೊರಟಲ್ಲಿ ಎಲ್ಲಿಯೂ ಅದು ಅಂಟಬಹುದು. ಕಣ್ಣಿಗೆ ಕಾಣದ ಈ ವೈರಸ್ಸಿಗೆ ಇನ್ನೂ ಮದ್ದನ್ನು ಹುಡುಕಿದವರಿಲ್ಲ. ಸದ್ಯಕ್ಕೆ ವೈದ್ಯಲೋಕಕ್ಕೆ ಇದೊಂದು ವಿಸ್ಮಯವಾಗಿಯೇ ಉಳಿದಿದೆ. ಹಾಗಿರುವಲ್ಲಿ, ಸರಕಾರದ ಕಾರ್ಯಸೂಚಿಯಂತೆ ನಮಗೆ ನಾವೇ ಶಿಸ್ತನ್ನು ರೂಢಿಸಿಕೊಂಡೆವಾದರೆ ಅದುವೇ ನೈಜ ಔಷಧಿ.
*ಏನದು ಶಿಸ್ತು?*
ಹೊರಗೆ:1. ಪರಸ್ಪರ ಐದು ಅಡಿಗಳಷ್ಟಾದರೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು. ಈಗಿನ ಸೋಂಕಿತರ ಸಂಖ್ಯೆ ಅಧಿಕಗೊಳ್ಳುತ್ತಿರುವುದು ಪರಸ್ಪರ ಸಂಪರ್ಕದಿಂದಲೇ ಅನ್ನುವುದನ್ನು ನೆನಪಿಟ್ಟುಕೊಳ್ಳಿ.
2. ಮಾಸ್ಕು ಕಡ್ಡಾಯವಾಗಿ ಧರಿಸಲೇ ಬೇಕು.
3. ಸಣ್ಣಮಕ್ಕಳು ಹಾಗೂ 60 ವಯಸ್ಸು ದಾಟಿದವರು. ಮನೆಯಲ್ಲೇ ಇರುವುದು ಉತ್ತಮ.
ಒಳಗೆ: 1.ಪರಸ್ಪರ ಅಂತರವನ್ನು ಕಾಪಾಡಿ 2. ಕೈ ತೊಳೆಯುತ್ತಿರಿ. ಯಾರ ಮನೆಗೆ ಹೋಗುವುದಾಗಲಿ, ಬೇರೆಯವರು ನಮ್ಮ ಮನೆಗೆ ಬರುವಂತೆ ಉತ್ತೇಜಿಸುವುದಾಗಲಿ ಸದ್ಯಕ್ಕೆ ಬೇಡ 3. ಮೂಗಿಗೆ, ಕಣ್ಣಿಗೆ, ಬಾಯಿಗೆ ಕೈಹಾಕುತ್ತಿರಬೇಡಿ.
ಸಾಮಾನ್ಯ ವಿಷಯಗಳು: ಆಗಾಗ ಬಿಸಿನೀರು ಕುಡಿಯುತ್ತಿರಿ 2. ಬದಲಿ ದಿನಗಳಂತೆ ಅರಶಿನ, ಜೀರಿಗೆ, ತುಳಸಿದಳ, ಲಾವಂಚ, ಬಜೆ ಇತ್ಯಾದಿಗಳನ್ನು ಬಿಸಿನೀರಿಗೆ ಹಾಕಿ ಕುಡಿಯುತ್ತಿರಿ.3.ಆದಷ್ಟು ಪ್ರಕೃತಿದತ್ತ ಆಹಾರವನ್ನೇ ಸೇವಿಸಿ. ದಿನಕಳೆದ ಆಹಾರಗಳು ಉತ್ತಮವಲ್ಲ.4.ದಿನಕ್ಕೆ 3ಸಲ ಉಪ್ಪಿನೀರಲ್ಲಿ ಗಾರ್ಗ್ಲ್ ಮಾಡಿ. ತಣ್ಣನೆಯ ವಸ್ತುಗಳನ್ನು ದೂರವಿಟ್ಟರೆ ಉತ್ತಮ.
ಅವರು ಸತ್ತರೆ ಸಾಯಲಿ ನಮ್ಮನ್ನು ಯಾಕೆ ಕೊಲ್ಲಬೇಕು?
ತರಕಾರಿ ಅಂಗಡಿಯಲ್ಲಿ ಕೇಳಿಬಂದ ಮಾತು. ಹೌದಲ್ವೆ? ಯಾರನ್ನೂ ಕೊಲ್ಲುವ ಅಧಿಕಾರ ನಮಗಿಲ್ಲ, ಅದಕ್ಕಾಗಿ ಹೇಳುವುದು, ಅಂಗಡಿಗಳಲ್ಲಿ ಮೈಮೇಲೆ ಬೀಳಬೇಡಿ, ಅಂತರವಿಟ್ಟುಕೊಳ್ಳಿ. ದಯವಿಟ್ಟು ಮಾಸ್ಕ್ ಧರಿಸಿ.
ವ್ಯರ್ಥವಾಗಿ ಯಾಕೆ ಪೇಟೆ ಸುತ್ತಬೇಕು? ಗುಂಪುಕಟ್ಟಿ ಯಾಕೆ ಮಾತನಾಡಬೇಕು? ದ್ವಿಚಕ್ರವಾಹನಗಳಲ್ಲಿ ಮೂರುನಾಲ್ಕು ಜನ ಅದೂ ಮಾಸ್ಕ್ ಇಲ್ಲದೆ ಯಾಕೆ ಬೀದಿಸುತ್ತಬೇಕು? ಹೀಗಾದರೆ, ನಮ್ಮನ್ನು ನೋಡಿ ಇತರರೂ ಇದೇ ರೀತಿ ವರ್ತಿಸಿದರೆ? ನಮ್ಮಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಕೆಟ್ಟುಹೋಗುತ್ತೆ ಅಲ್ವೆ? ಯೋಚಿಸಿ. ಇತರರಿಗೆ ನಾವು ಆದರ್ಶವಾಗಿರೋಣ.
ನೀವು ಕನಸಲ್ಲಾದರೂ ಯೋಚಿಸಿದ್ದೀರ?
ಭೀಕರವಾದ ಕೊರೊನ ವೈರಸ್ ವಿರುದ್ಧದ ಸಮರ ಹಾಗೂ ಸಾರ್ವಜನಿಕರ ನಿಭಾವಣಾ ಸಂದರ್ಭದಲ್ಲಿ ಶಾಸಕರು, ಹಶೀಲ್ದಾರ್ ಮೊದಲ್ಗೊಂಡು ಪೊಲೀಸರು, ಆಶಾ ಕಾರ್ಯಕರ್ತೆಯರು, ಪುರಸಭೆ, ಆರೋಗ್ಯ, ಕಂದಾಯ ಇಲಾಖೆಯೇ ಮೊದಲಾದ ಇಲಾಖೆಗಳಿಗೆ ಸಂಬಂಧಿತ ಅಧಿಕಾರಿಗಳು, ಅಲ್ಲಿನ ನೌಕರರು ರಾತ್ರೆಹಗಲೆನ್ನದೆನಿರ್ವಹಿಸಿದ ಕರ್ತವ್ಯ ಇದೆಯಲ್ಲ? ಖಂಡಿತ ಆ ಹೊತ್ತು ಅವರು, ಸಿಗುವ ಸಂಬಳವನ್ನು ಬದಿಗಿಟ್ಟು, ಪ್ರಾಣದ ಹಂಗನ್ನು ತೊರೆದು, ಮನೆಮಂದಿಯನ್ನೂ ಮರೆತು ನಡು ಬಿಸಿಲಿನಲ್ಲಿ ನಮ್ಮ ಆರೋಗ್ಯಕ್ಕಾಗಿ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ದುಡಿಯುತ್ತಿದ್ದಾರಲ್ಲ!? ಅವರೊಂದಿಗೆ ನಾವು ಯಾವ ರೀತಿ ವರ್ತಿಸುತ್ತಿದ್ದೇವೆ ಯೋಚಿಸುವ…..ಹೇಗೆ ವರ್ತಿಸಬೇಕು? ಅರ್ಥಮಾಡಿಕೊಳ್ಳುವ.
ಬಂಟ್ವಾಳ ಹಾಟ್ ಸ್ಪಾಟ್
ಬಿಸಿ ಆರಬೇಕಾದರೆ ನಾವು ಸಾವಧಾನದಿಂದ ಸರಕಾರದ ಸಾಮಯಿಕ ಕಾನೂನುಗಳನ್ನು ಪಾಲಿಸುತ್ತಾ ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು. ಸರಕಾರೀ ಇಲಾಖೆಗಳ ಜವಾಬ್ದಾರಿಯನ್ನು ಅರಿತುಕೊಂಡು ಅವರ ನಿಯಮಗಳನ್ನು ಅನುಸರಿಸುವ.
ನಮಗಾಗಿ, ಕನಸುಗಳ ಹೊತ್ತ ಆ ನಮ್ಮ ಎಳೆಯ ಮಕ್ಕಳಿಗಾಗಿ, ಕುಟುಂಬಕ್ಕಾಗಿ ಸರಕಾರದ ಕಾನೂನುಗಳನ್ನು ಪಾಲಿಸೋಣ.
ಇದಕ್ಕೆ ತಪ್ಪಿ ನಡೆದಲ್ಲಿ ಭಾವೀ ಸಮಾಜವನ್ನು ನಾಶಗೊಳಿಸುವ ಅಪವಾದಕ್ಕೆ……..ನಾವು…..
ಮನೆಯಲ್ಲೇ ಇದ್ದುಕೊಂಡು ನಾವೂ ಬದುಕೋಣ ಇತರರನ್ನೂ ಬದುಕಗೊಳಿಸೋಣ

ರಾಜಮಣಿ ರಾಮಕುಂಜ
ನಿವೃತ್ತ ಉಪನ್ಯಾಸಕ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here