ಬಂಟ್ವಾಳ: ಲಾಕ್‌ಡೌನ್‌ನ ಬಳಿಕ ಊರಿಗೆ ಮರಳಲಾಗದೆ ಉಳಿದಿದ್ದ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಭಾಗದ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ವ್ಯವಸ್ಥೆ ಕಲ್ಪಿಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈಯವರು ಬಂಟ್ವಾಳ ತಹಶೀಲ್ದಾರ್ ಅವರನ್ನು ವಿನಂತಿಸಿಕೊಂಡ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಕಾರ್ಮಿಕರನ್ನು ಕಳುಹಿಸಿಕೊಡಲು ಬಸ್ಸಿನ ವ್ಯವಸ್ಥೆ ಹಾಗೂ ಉತ್ತರ ಭಾರತದ ಭಾಗದ ಕಾರ್ಮಿಕರು ಊರಿಗೆ ಹೋಗುವವರೆಗೆ ಅವರಿಗೆ ಪಡಿತರ ಸಾಮಗ್ರಿ ವಿತರಿಸಲು ಕ್ರಮಗೊಳ್ಳಲಾಯಿತು.
ಸೆಲೂನು ಮತ್ತಿತರ ಕಡೆಗಳಲ್ಲಿ ಕೆಲಸ ನಿರ್ವಹಿಸಲು ಉತ್ತರ ಪ್ರದೇಶದಿಂದ ಬಂದಿದ್ದ ೯ ಮಂದಿ ಕಾರ್ಮಿಕರು ಹಾಗೂ ಕನಪಾಡಿ ಜಾತ್ರೆಗೆ ಆಗಮಿಸಿದ್ದ ಕಾರವಾರದ ದಂಪತಿ ಹಾಗೂ ಕುಷ್ಠಗಿಯ ಒರ್ವ ಕೂಲಿ ಕಾರ್ಮಿಕ ಊರಿಗೆ ಮರಳಲಾಗದೆ ಬಂಟ್ವಾಳದಲ್ಲೇ ಉಳಿದಿದ್ದರು. ಕನಪಾಡಿಯಲಿದ್ದ ದಂಪತಿಗಳು ತಮ್ಮನ್ನು ಊರಿಗೆ ಕಳುಹಿಸಿ ಕೊಡುವಂತೆ ಬುಧವಾರ ಇಲ್ಲಿನ ಅಧಿಕಾರಿಗಳನ್ನು ಕೇಳಿಕೊಂಡಾಗ ಕಚೇರಿಯಿಂದ ಕಚೇರಿಗೆ ಅಲೆದಾಡಿಸಿದ್ದಾರೆ ಎನ್ನುವ ದೂರಿನ ಮೇರೆ ಮಾಜಿ ಸಚಿವ ಬಿ. ರಮನಾಥ ರೈ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಮಿಕರೊಂದಿಗೆ ಗುರುವಾರ ಬೆಳಿಗ್ಗೆ ಬಿ.ಸಿ.ರೋಡಿನ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ರಾಜ್ಯದೊಳಗಿನ ಕಾರ್ಮಿಕರನ್ನು ಊರಿಗೆ ಕಳುಹಿಸಲು ಹಾಗೂ ಉತ್ತರ ಪ್ರದೇಶದ ಕಾರ್ಮಿಕರಿಗೆ ಊರಿಗೆ ಹೋಗುವ ವರೆಗೆ ಅವರಿಗೆ ಪಡಿತರ ನೀಡುವಂತೆ ವಿನಂತಿಕೊಂಡ ಹಿನ್ನಲೆಯಲ್ಲಿ ಗುರುವಾರವೇ ಬಸ್ಸಿನಲ್ಲಿ ರಾಜ್ಯದೊಳಗಿನ ಕಾರ್ಮಿಕರನ್ನು ಕಳುಹಿಸಿ ಕೊಡುವುದಾಗಿ ಹಾಗೂ ಉತ್ತರ ಪ್ರದೇಶದ ಕಾರ್ಮಿಕರಿಗೆ ಪಡಿತರ ಸಾಮಾಗ್ರಿ ನೀಡುವುದಾಗಿ ತಹಶೀಲ್ದಾರ್ ರಶ್ಮಿ ಎಸ್. ಆರ್ ತಿಳಿಸಿದರು.

ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ರಮನಾಥ ರೈ ಮಹರಾಷ್ಟ್ರದಲ್ಲಿ ಹಲವು ಮಂದಿ ಕನ್ನಡಿಗರು ಲಾಕ್‌ಡೌನ್‌ನಿಂದ ಸಿಲುಕಿ ಕೊಂಡಿದ್ದು ಅವರನ್ನು ಊರಿಗೆ ಕರೆತರುವಂತೆ ದೂರವಾಣಿಯ ಮೂಲಕ ವಿನಂತಿಸಿ ಕೊಂಡಿದ್ದಾರೆ. ಬಸ್ಸಿನ ವ್ಯವಸ್ಥೆಗಳನ್ನು ಅಲ್ಲಿನ ಜನರೇ ಕಲ್ಪಿಸಿಕೊಟ್ಟಿದ್ದರೂ ರಾಜ್ಯದಲ್ಲಿ ಅನುಮತಿ ಸಿಗದೇ ಇರುವುದರಿಂದ ಅವರಿಗೆ ಬರಲು ಅಡ್ಡಿಯಾಗಿದೆ. ಅವರ ಆರೋಗ್ಯ ತಪಾಸಣೆ ಮಾಡಿಸಿ ಸುರಕ್ಷಿತವಾಗಿ ಅವರನ್ನು ಮಹರಾಷ್ಟ್ರದಿಂದ ರಾಜ್ಯಕ್ಕೆ ಕರೆತರುವ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂದರ್ಭ ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ವೆಂಕಪ್ಪ ಪೂಜಾರಿ, ಸಿದ್ದಿಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here