ಬೆಂಗಳೂರು: ಸಿ.ಎಂ. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಲಾಕ್ ಡೌನ್ ನಿಂದ ರಾಜ್ಯದ ಜನತೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮುಖ್ಯಮಂತ್ರಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಲಾಕ್‌ ಡೌನ್‌ ಸಡಿಲಿಕೆ ಬಳಿಕ ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳಿಸಲಾಗಿದ್ದು, ಲಾಕ್‌ ಡೌನ್‌ ಸಡಿಲಿಕೆಯಾಗಿದೆ ಎಂದ ಮಾತ್ರಕ್ಕೆ ಸಾರ್ವಜನಿಕರು ಇದನ್ನು ಮನಬಂದಂತೆ ಬಳಸಿಕೊಳ್ಳುವಂತಿಲ್ಲ ಎಂದರು.

ಕೊರೋನಾ ಭೀತಿ ಹಿನ್ನೆಲೆ ಲಾಕ್ ಡೌನ್ ನಡುವೆಯೂ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಅನುವು ಮಾಡಿಕೊಟ್ಟಿದ್ದು, ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ ಗೆ 25 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿದ ಯಡಿಯೂರಪ್ಪನವರು, ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಶೀಘ್ರದಲ್ಲೇ ಪರಿಹಾರ ಘೋಷಿಸುವುದಾಗಿ ತಿಳಿಸಿದ್ದಾರೆ.

1610 ಕೋಟಿ ರೂಪಾಯಿ ಬೃಹತ್‌ ಮೊತ್ತದ ಪ್ಯಾಕೇಜ್‌ ಘೋಷಿಸಿದ್ದು, ಆಟೋ, ಟ್ಯಾಕ್ಸಿ ಚಾಲಕ, ಆಗಸ ಹಾಗೂ ಕ್ಷೌರಿಕರಿಗೆ ಒಂದು ಬಾರಿಗೆ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಎರಡು ತಿಂಗಳ ವಿದ್ಯುತ್‌ ಶುಲ್ಕ ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದ ಯಡಿಯೂರಪ್ಪನವರು ಇದೇ ಸಂದರ್ಭದಲ್ಲಿ ವಿದ್ಯುತ್‌ ಬಿಲ್‌ ಮುಂಗಡವಾಗಿ ಪಾವತಿಸುವವರಿಗೆ ರಿಯಾಯಿತಿ ನೀಡಲಾಗುತ್ತದೆ ಎಂದಿದ್ದಾರೆ.

ಬೃಹತ್‌ ಕೈಗಾರಿಕೆಗಳಿಗೆ ಎರಡು ತಿಂಗಳು ವಿದ್ಯುತ್‌ ಬಿಲ್‌ ಕಟ್ಟದಿದ್ದರೂ ಯಾವುದೇ ದಂಡ ವಿಧಿಸಲಾಗುವುದಿಲ್ಲ  ಎಂದು ಯಡಿಯೂರಪ್ಪ ತಿಳಿಸಿದ್ದು, ನೇಕಾರರ ಸಾಲ ಮನ್ನಾಕ್ಕಾಗಿ 80 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ ನೇಕಾರ ಸಮ್ಮಾನ್‌ ಯೋಜನೆಯಡಿ ಎರಡು ಸಾವಿರ ರೂಪಾಯಿಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಲಾಕ್‌ ಡೌನ್‌ ಸಡಿಲಿಕೆ ಮಾಡಿ ಕಟ್ಟಡ ಕಾಮಗಾರಿಗಳಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗದಂತೆ ತಡೆಯುವ ಸಲುವಾಗಿ ಅವರುಗಳಿಗೆ ತಲಾ ಮೂರು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು  ಪರಿಹಾರ ಘೋಷಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here