Wednesday, October 18, 2023

ಕೊರೋನ ವೈರಸ್ ನಿಯಂತ್ರಣದಲ್ಲಿ ಕಾರ್ಮಿಕರ ಸಹಕಾರ ಅಪಾರ: ಯು.ಟಿ.ಖಾದರ್

Must read

ಬಂಟ್ವಾಳ: ಲಾಕ್‍ಡೌನ್‍ನಿಂದಾಗಿ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೆ ಕುಟುಂಬದ ನಿರ್ವಾಹಣೆ ಹಾಗೂ ಊಟಕ್ಕೆ ಕಷ್ಟವಾದರೂ ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಚಾಲಕರು ಹಾಗೂ ಕಾರ್ಮಿಕ ವರ್ಗ ಸಂಪೂರ್ಣ ಸಹಕಾರ ನೀಡಿದೆ. ಇದಕ್ಕಾಗಿ ಇಡೀ ಸಮಾಜ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಬೇಕು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಕಾರ್ಮಿಕರ ದಿನದ ಅಂಗವಾಗಿ ಫರಂಗಿಪೇಟೆ ಮತ್ತು ಮೇರಮಜಲು ಗ್ರಾಮದ 280 ಆಟೋ ರಿಕ್ಷಾ, ಗೂಡ್ಸ್ ವಾಹನ ಹಾಗೂ ಪ್ರವಾಸಿ ಕಾರುಗಳ ಚಾಲಕರಿಗೆ ವೈಯಕ್ತಿಕ ಖರ್ಚಿನಲ್ಲಿ ಶುಕ್ರವಾರ ಫರಂಗಿಪೇಟೆಯಲ್ಲಿ ಆಹಾರ ಸಮಾಗ್ರಿ ಹಾಗೂ ತರಕಾರಿ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರು, ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಚಾಲಕರ ಕೊಡುಗೆ ಅಪಾರವಾಗಿದೆ. ವರ್ಷ ಪೂರ್ತಿ ಬೆವರು ಸುರಿಸಿ ಅವರು ಪಡುವ ಶ್ರಮದಿಂದ ದೇಶ ಅಭಿವೃದ್ಧಿಯಾಗುತ್ತಿದೆ. ಆದರೆ ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಸಮಾಜಕ್ಕೆ ಕಾಣುತ್ತಿಲ್ಲ. ಎಲ್ಲಾ ಕಾರ್ಮಿಕ ವರ್ಗದವರಿಗೆ ಕಾರ್ಮಿಕ ದಿನದ ಶುಭಾಷಯಗಳು ಎಂದು ಹೇಳಿದರು.

ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಆದರೆ ಸರಕಾರದ ಯಾವುದೇ ಕಾರ್ಯಕ್ರಮಗಳು ಕಾರ್ಮಿಕರಿಗೆ ತಲುಪುತ್ತಿಲ್ಲ. ಇಂದು ಕಾರ್ಮಿಕರು ಭಾರೀ ಸಂಕಷ್ಟದಲ್ಲಿ ಇದ್ದು ಕಾರ್ಮಿಕರ ಎಲ್ಲಾ ಸವಲತ್ತುಗಳನ್ನು ಕಾರ್ಮಿಕರಿಗೆ ತಲುಪಿಸುವ ಕೆಲಸವನ್ನು ಸರಕಾರ ಕೂಡಲೇ ಮಾಡಬೇಕು. ಕಾರ್ಮಿಕರ ಕುಟುಂಬಗಳು ಸ್ವಾಭಿಮಾನದಿಂದ ಜೀವನ ನಡೆಸಲು ಸರಕಾರ ಅನುವು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರಕಾರ ಸ್ಪಂದಿಸಬೇಕು. ಕರ್ನಾಟಕ ಸರಕಾರ ಕಾರ್ಮಿಕರು, ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಚಾಲಕರಿಗೆ ಕೇರಳ ಸರಕಾರದ ಮಾದರಿಯಲ್ಲಿ ಭತ್ಯೆ ನೀಡಬೇಕು. ಕಾರ್ಮಿಕರಿಗೆ ಭತ್ಯೆ ನೀಡುವುದು ಕೇರಳದಲ್ಲಿ ಸಾಧ್ಯವಾಗುವುದಾದರೆ ನಮ್ಮ ರಾಜ್ಯದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದ ಯು.ಟಿ.ಖಾದರ್, ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸರಕಾರ ಕಾರ್ಮಿಕ ದಿನಾಚರಣೆಯನ್ನು ಆಚರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಪುದು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ರಂದ ಪೂಜಾರಿ, ಮುಹಮ್ಮದ್ ಮೋನು, ಭಾಸ್ಕರ್ ರೈ, ಝಾಹಿರ್, ಮೇರ ಮಜಲು ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಫರಂಗಿಪೇಟೆ, ಮಾರಿಪಲ್ಲ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಾಫರ್ ಸುಜೀರ್, ಉಪಾಧ್ಯಕ್ಷ ಇಂಶಾದ್ ಮಾರಿಪಲ್ಲ, ಮೇರಮಜಲು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುಹಮ್ಮದ್ ಮೋನು, ಪ್ರವಾಸಿ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಮ್ರಾನ್, ಗೂಡ್ಸ್ ಟೆಂಪೊ ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಸ್ಮಾಯೀಲ್ ಹತ್ತನೇಮೈಲುಗಲ್ಲು ಸಹಿತ ಪ್ರಮುಖರಾದ ಎಂ.ಕೆ.ಮುಹಮ್ಮದ್, ಇಮ್ತಿಯಾಝ್ ಆಲ್ಫಾ ತುಂಬೆ, ಇಬ್ರಾಹೀಂ ವಲವೂರು, ಹುಸೈನ್ ಪಡಿ, ಸಲಾಂ ಮಲ್ಲಿ, ಮಜೀದ್ ಪೇರಿಮಾರ್, ಇಸ್ಮಾಯೀಲ್ ಹತ್ತನೇಮೈಲುಗಲ್ಲು, ಗಫೂರ್ ಫರಂಗಿಪೇಟೆ, ಹಕೀಂ ಮಾರಿಪಲ್ಲ, ಹಾಶಿಂ ಮಾರಿಪಲ್ಲ ಮೊದಲಾದವರು ಉಪಸ್ಥಿತರಿದ್ದರು.

More articles

Latest article