ಮಂಗಳೂರು: ಲಾಕ್‌ಡೌನ್‌ನಿಂದಾಗಿ ತಮ್ಮ ಕುಟುಂಬ ಸೇರಲಾಗದೆ ಬಾಕಿಯಾಗಿರುವ ಕಾರ್ಮಿಕರ ಅಂತರ್‌ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡುವ ಸಂಬಂಧ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ ಮುಂಜಾಗೃತ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

4,000 ಮಂದಿ ನಿರ್ಗಮನ
ಮೊದಲ ಹಂತದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿ ಕೃಷಿ ಕಾರ್ಯ ಕೈಗೊಳ್ಳಲು ಅಥವಾ ತಮ್ಮ ಕೆಲಸದ ಸ್ಥಳಗಳಿಗೆ ತಲುಪುವ ಸಲುವಾಗಿ ಅವರನ್ನು ಸ್ವಗ್ರಾಮಗಳಿಗೆ ತಲುಪಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಇದರಂತೆ ದ.ಕ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದಲೂ ವಲಸೆ ಕಾರ್ಮಿಕರು ತೆರಳಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಈಗಾಗಲೇ ಮಂಗಳೂರು ಹೊರತುಪಡಿಸಿ ಉಳಿದ ತಾಲೂಕುಗಳಿಂದ ವಲಸೆ ಕಾರ್ಮಿಕರನ್ನು ಕಳುಹಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸುಮಾರು 4,000 ಮಂದಿ ಈಗಾಗಲೇ ತೆರಳಿದ್ದಾರೆ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಇನ್ನು 3-4 ದಿನಗಳೊಳಗೆ ಇದು ಪೂರ್ಣಗೊಳ್ಳಲಿದೆ ಎಂದರು. ವಿದೇಶದಲ್ಲಿರುವ ಜಿಲ್ಲೆಯ ನಾಗರಿಕರನ್ನು ಇಲ್ಲಿಗೆ ಕರೆತರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಎಲ್ಲ ಸಿದ್ಧತೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಂಸದ ನಳಿನ್‌ಕುಮಾರ್‌ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಶಾಸಕರಾದ ಯು.ಟಿ. ಖಾದರ್‌, ಎಸ್‌. ಅಂಗಾರ, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಹರೀಶ್‌ ಕುಮಾರ್‌, ಐವನ್‌ ಡಿ’ಸೋಜಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್‌, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌. ಹರ್ಷ ಉಪಸ್ಥಿತರಿದ್ದರು.

ಶಾಸಕರ ಮಧ್ಯೆ ಮಾತಿನ ಚಕಮಕಿ
‘ಕೋವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಜನಪ್ರತಿನಿಧಿಗಳೇ ವಿರೋಧ ಮಾಡುತ್ತಿರುವುದು ಸರಿಯಾದ ನಿರ್ಧಾರವಲ್ಲ’ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು. ಆಗ ಶಾಸಕ ವೇದವ್ಯಾಸ್‌ ಕಾಮತ್‌ “ಲಾಕ್‌ಡೌನ್‌ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ಖಾದರ್‌ ಅವರು ಬೇರೆ ಜಿಲ್ಲೆಯಲ್ಲಿದ್ದವರನ್ನು ಕಾರಲ್ಲಿ ಕರೆದುಕೊಂಡು ಬರುತ್ತಿರುವುದು ಸರಿಯಾದ ನಿರ್ಧಾರವೇ?’ ಎಂದು ಪ್ರಶ್ನಿಸಿದರು. ಅದಕ್ಕೆ ಖಾದರ್‌, “ಬೇರೆ ಜಿಲ್ಲೆಯಲ್ಲಿ ಬಾಕಿಯಾದವರನ್ನು ಮಾನವೀಯ ದೃಷ್ಟಿಯಿಂದ ಕರೆ ತಂದಿರಬಹುದು. ಇದರಲ್ಲಿ ರಾಜ ಕೀಯ ಇಲ್ಲ’ ಎಂದರು.

ಯು.ಟಿ. ಖಾದರ್‌ ಅವರನ್ನು ಬೆಂಬಲಿಸಿದ ಐವನ್‌ ಡಿ’ಸೋಜಾ, “ಲಾಕ್‌ಡೌನ್‌ ಮಧ್ಯೆ ಜಲ್ಲಿ, ಕಲ್ಲು ಸಾಗಾಟದ ಲಾರಿಗೆ ಅನುಮತಿ ನೀಡುವಂತೆ ಶಾಸಕರೊಬ್ಬರು ಪತ್ರ ನೀಡಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು. ಈ ರೀತಿಯಾಗಿ ಬಿಜೆಪಿ- ಕಾಂಗ್ರೆಸ್‌ ಶಾಸಕರ ಮಧ್ಯೆ ಕೆಲವೊಂದು ವಿಚಾರವಾಗಿ ಆರೋಪ – ಪ್ರತ್ಯಾರೋಪಗಳು ನಡೆದವು.

ಬೋಳೂರಿನಲ್ಲಿ ಅಂತ್ಯಸಂಸ್ಕಾರ
ಕೋವಿಡ್‌ನಿಂದ ಮೃತಪಟ್ಟವರನ್ನು ಮಂಗಳೂರಿನ ಬೋಳೂರು ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಸಾಮಾನ್ಯ ರೋಗಿಗಳಿಗೆ ಕ್ಲಿನಿಕ್‌, ಆಸ್ಪತ್ರೆ, ನರ್ಸಿಂಗ್‌ ಹೋಂಗಳಲ್ಲಿ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಸರಕಾರ ಮಾರ್ಗದರ್ಶನ ಕಳುಹಿಸಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here