Friday, October 20, 2023

ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲ: ಹಲವಾರು ರಿಯಾಯಿತಿಗಳು

Must read

ಉಡುಪಿ: ಒಂದು ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಇಲ್ಲದ ಹಿನ್ನೆಲೆ ಜಿಲ್ಲೆ ಹಸಿರು ವಲಯದಲ್ಲಿದೆ. ಇದರಿಂದಾಗಿ ಇಂದಿನಿಂದ ಕೆಲವೊಂದು ರಿಯಾಯಿತಿಗಳನ್ನು ನೀಡಿದ ಪರಿಣಾಮ ಜಿಲ್ಲೆಯಾದ್ಯಂತ ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡವು. ಈ ಮೂಲಕ ಜಿಲ್ಲೆಯ ಜನಜೀವನ ಸಹಜದತ್ತ ಮರಳುತ್ತಿದೆ. ಇಂದು ಬೆಳಗ್ಗೆಯಿಂದಲೇ ಉಡುಪಿ ನಗರ, ಕುಂದಾಪುರ, ಬ್ರಹ್ಮಾವರ, ಕಾಪು, ಪಡುಬಿದ್ರೆ, ಬೈಂದೂರು,
ಕಾರ್ಕಳ ಸೇರಿದಂತೆ ಜಿಲ್ಲೆಯ ಪ್ರಮುಖ ಪೇಟೆಗಳಲ್ಲಿ ಜನ ಹಾಗೂ ವಾಹನ ಸಂದಣಿ ಹೆಚ್ಚಾಗಿದ್ದವು. ಜಿಲ್ಲೆಯಲ್ಲಿ ಕೆಲವೊಂದು ನಿರ್ಬಂಧಗಳ ಸಡಿಲಿಕೆಯಿಂದ ರಾಷ್ಟ್ರೀಯ ಹೆದ್ದಾರಿ ಸಹಿತ ಜಿಲ್ಲೆಯ ಎಲ್ಲ ರಸ್ತೆಗಳಲ್ಲಿಯೂ ವಾಹನ ಸಂಚಾರ ಹಿಂದಿಗಿಂತ ಹೆಚ್ಚು ಕಂಡು ಬಂದಿದೆ. ಕಾರು, ಆಟೋ ರಿಕ್ಷಾ, ಲಾರಿ, ಟೆಂಪೋ, ದ್ವಿಚಕ್ರ ವಾಹನಗಳ ಓಡಾಟ ಎಂದಿನಂತೆಯೇ ಇದ್ದವು.
ಲಾಕ್ ಡೌನ್ ದಿನಗಳಲ್ಲಿ ದಿನಸಿ, ತರಕಾರಿ, ಬೇಕರಿ ಅಂಗಡಿಗಳು ಮಾತ್ರ ತೆರೆಯಲು ಅವಕಾಶ ಇದ್ದವು. ಆದರೆ ಇಂದಿನಿಂದ ಕೆಲವೊಂದು ಸಣ್ಣಪುಟ್ಟ ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಜ್ಯೂಸ್, ಫ್ಯಾನ್ಸಿ ಅಂಗಡಿಗಳು, ಕಟ್ಟಡ ಕಾಮಗಾರಿಗೆ ಪೂರಕ ಸಾಮಗ್ರಿಗಳ ಹಾರ್ಡ್‌ವೇರ್, ಸಿಮೇಂಟ್, ಸಿರಮಿಕ್ಸ್ ಅಂಗಡಿಗಳು, ಗ್ಯಾರೇಜ್, ಪಂಚರ್ ಮತ್ತು ಟಯರ್ ಅಂಗಡಿಗಳು ವ್ಯಾಪಾರವನ್ನು ಆರಂಭಿಸಿದವು. ಆದರೆ ಗ್ರಾಹಕರು ಇಲ್ಲದ ಕಾರಣ ಬೆಳಗ್ಗೆ 11ರ ನಂತರ ಎಲ್ಲ ಅಂಗಡಿಗಳನ್ನು ಬಂದ್ ಮಾಡಿದರು. ಉಡುಪಿ ನಗರದ ಪ್ರಮುಖ ರಸ್ತೆಗಳು ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿದ್ದವು. ಕೆಲವು ಕಡೆಗಳಲ್ಲಿ ಸುರಕ್ಷಿತ ಅಂತರವನ್ನು ಗಾಳಿಗೆ ತೂರಲಾಗಿತ್ತು. ಹಲವು ಮಂದಿ ಮಾಸ್ಕ್ ಹಾಕದೆ ತಿರುಗುತ್ತಿರುವುದು ಕಂಡುಬಂತು. ಎಲ್ಲ ಕಡೆ ಪೊಲೀಸರು ಗಸ್ತು ತಿರುಗುತ್ತಿದ್ದು, ನಗರದ ಕಲ್ಸಂಕದಲ್ಲಿ ವಾಹನ ತಪಾಸಣೆಯನ್ನು ನಡೆಸುತ್ತಿದ್ದರು.

ಬೃಹತ್ ಬಟ್ಟೆ ಅಂಗಡಿಗಳು, ಚಪ್ಪಲ್ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ಅಂಗಡಿಗಳು, ಮಾಲ್‌ಗಳು ಬಂದ್ ಆಗಿದ್ದವು. ಬಸ್ ಸಂಚಾರ ಇಲ್ಲದ ಪರಿಣಾಮ ಸಿಟಿ ಹಾಗೂ ಸರ್ವಿಸ್ ಬಸ್‌ ನಿಲ್ದಾಣಗಳು ಜನ ಸಂಚಾರವಿಲ್ಲದೆ ಎಂದಿನಂತೆಯೇ ಬೀಕೋ ಎನ್ನುತ್ತಿತ್ತು.

More articles

Latest article