ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ 2ನೇ ಹಂತದ ಲಾಕ್ ಡೌನ್ ಮೇ.3 ರ ವರೆಗೆ ಮುಂದುವರೆಸಲು ಸೂಚಿಸಿದೆ. ಮೇ.3ರ ನಂತರ ಮುಂದೇನು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭವಾಗಲಿದೆ.

ಭಾರತದಲ್ಲಿ ಲಾಕ್​ಡೌನ್ ಜಾರಿಯಾದ ಬಳಿಕ ಮೋದಿ ಸಿಎಂಗಳ ಜತೆ ನಡೆಸುತ್ತಿರುವ 3ನೇ ಸಭೆ ಇದಾಗಿದ್ದು, ಮಹಾರಾಷ್ಟ್ರ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಗಂಭೀರಗೊಂಡಿರುವುದರಿಂದ ಐದಕ್ಕೂ ಹೆಚ್ಚು ರಾಜ್ಯಗಳು ಲಾಕ್​ಡೌನ್ ವಿಸ್ತರಣೆ ಬೇಡಿಕೆಯನ್ನು ಪ್ರಧಾನಿ ಮುಂದಿಡುವ ಸಾಧ್ಯತೆ ಇದೆ. ಏಪ್ರಿಲ್ 20ರ ಬಳಿಕ ಕೆಲ ಪ್ರದೇಶಗಳಲ್ಲಿನ ನಿರ್ಬಂಧ ಸಡಿಲಿಸಿರುವ ಬಗ್ಗೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ, ರಕ್ಷಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.

ಈಗಾಗಲೇ 9 ಜಿಲ್ಲೆಗಳ ಗ್ರಾಮೀಣ ಕೈಗಾರಿಕೆಗಳಿಗೆ ವಿನಾಯ್ತಿ ನೀಡಿರುವ ರಾಜ್ಯ ಸರ್ಕಾರ ಮೇ 3ರ ನಂತರ ಹಂತ ಹಂತವಾಗಿ ಲಾಕ್ ಡೌನ್ ನ್ನು ಸಡಿಲಗೊಳಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಕೋವಿಡ್ 19 ಬಂದ ನಂತರ ಲಾಕ್ ಡೌನ್ ಘೋಷಣೆಯಾಗಿ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಅದರ ಪುನಶ್ಚೇತನಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಸಾಮಾಜಿಕ ಅಂತರ, ಸಾಕಷ್ಟು ಮುಂಜಾಗ್ರತೆ ನೋಡಿಕೊಂಡು ಮತ್ತೆ ಚಟುವಟಿಕೆಗಳ ಪುನರಾರಂಭಕ್ಕೆ ಗಮನ ಹರಿಸುತ್ತಿದೆ ಎನ್ನಲಾಗಿದೆ.

ಇಂದು ಬೆಳಗ್ಗೆ ಪ್ರಧಾನಿ ಮೋದಿ ನಡೆಸುವ ವಿಡಿಯೊ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್.ವೈ ರಾಜ್ಯದ ಸ್ಥಿತಿಗತಿ ಮತ್ತು ಜನರ, ಸರ್ಕಾರದ ತಜ್ಞರು, ಅಧಿಕಾರಿಗಳ ಸಲಹೆ, ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಮೇ 3ರ ನಂತರ ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಿಸುವುದೇ ಅಥವಾ ಸಡಿಲಿಸುವುದೇ ಎಂಬ ಬಗ್ಗೆ ಕೇಂದ್ರ ಸರ್ಕಾರದ ವಿವೇಚನೆ ನಿರ್ಧಾರಕ್ಕೆ ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here