ವಿಟ್ಲ: ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಮದುವೆ, ಶುಭ ಸಮಾರಂಭಗಳು, ಜಾತ್ರೆ-ಉತ್ಸವಗಳು ನಡೆಯುತ್ತಿರುತ್ತವೆ. ಕೋವಿಡ್ 19ರ ಪರಿಣಾಮ ದೇಶದಲ್ಲಿ ಲಾಕ್‍ಡೌನ್ ಪರಿಣಾಮವಾಗಿ ನಮಗೆ ಈ ವರ್ಷ ವ್ಯಾಪಾರವೇ ಇರಲಿಲ್ಲ. ನಮ್ಮ ವ್ಯವಹಾರ ವಾರ್ಷಿಕವಾಗಿ 6-7 ತಿಂಗಳು ಮಾತ್ರ ಇರುತ್ತದೆ. ಜೂನ್ ತಿಂಗಳಲ್ಲಿ ಮಳೆ ಬಿದ್ದ ಬಳಿಕ ನಮಗೆ ವ್ಯವಹಾರ ಇರುವುದೇ ಇಲ್ಲ. 6000ಕ್ಕಿಂತಲೂ ಅಧಿಕ ಮಂದಿ ದ.ಕ.ಜಿಲ್ಲೆಯಲ್ಲಿ ಶಾಮಿಯಾನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು ಇದೀಗ ಭಾರೀ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದುದರಿಂದ ಜಿಲ್ಲಾ ಶಾಮಿಯಾನ ನೌಕರರಿಗೆ ಪರಿಹಾರ ನೀಡಬೇಕೆಂದು ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘವು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಮನವಿಯನ್ನು ಪರಿಗಣಿಸಿ, ಸಂಕಷ್ಟಕ್ಕೊಳಗಾದ ನೌಕರರಿಗೆ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ ಎಂದು ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here