ಹಸಿದವರ ಹೊಟ್ಟೆ ತುಂಬಿಸದಿದ್ದರೆ ಆ ಹಣ ನನಗೆ ಶಾಪ ಹಾಕಿತು
ಬಂಟ್ವಾಳ: ಪವಿತ್ರ ಹಜ್ ಯಾತ್ರೆಯ ಮಹದಾಸೆಯಿಂದ ಹಲವಾರು ವರ್ಷಗಳಿಂದ ಕೂಡಿಟ್ಟ ಹಣದಿಂದ ಹಸಿದ ಹೊಟ್ಟೆಗಳನ್ನು ತುಂಬಿಸುವ ಮೂಲಕ ಹಜ್ ನಿರ್ವಹಿಸಿದ ಪುಣ್ಯವನ್ನು ಪಡೆಯಲು ಅಬ್ದುಲ್ ರಹ್ಮಾನ್ ಎಂಬವರು ಬಯಸಿದ್ದಾರೆ.
ತಾಲೂಕಿನ ಗೂಡಿನ ಬಳಿಯ ನಿವಾಸಿ ಅಬ್ದುಲ್ ರಹ್ಮಾನ್ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಕೂಲಿ ಮಾಡಿ ಸಂಪಾದಿಸಿದ ಹಣದಿಂದ ತನ್ನ ಕುಟುಂಬವನ್ನು ಸಾಕುವುದರ ಜೊತೆಗೆ ಪವಿತ್ರ ಮಕ್ಕಾ, ಮದೀನ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ಒಂದಿಷ್ಟು ಹಣವನ್ನು ಹಲವಾರು ವರ್ಷಗಳಿಂದ ಕೂಡಿಡುತ್ತಾ ಬಂದಿದ್ದಾರೆ.

ಕೊರೋನ ಎಂಬ ಮಹಾಮಾರಿ ವೈರಸ್ ಲಕ್ಷಾಂತರ ಜೀವಗಳನ್ನು ಬಲಿಪಡೆದು ಜಗತ್ತನ್ನೇ ನಡುಗಿಸಿದೆ. ಈ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಇದರಿಂದ ಕೆಲಸ, ಕಾರ್ಯವಿಲ್ಲದೆ ಬಡ ಮತ್ತು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಮನಗಂಡ ಅಬ್ದುಲ್ ರಹ್ಮಾನ್ ತಾನು ಹಜ್ ಯಾತ್ರೆಗೆ ಕೂಡಿಟ್ಟ ಹಣದಿಂದ ಅಕ್ಕಿ ಸಹಿತ ಆಹಾರ ಸಾಮಗ್ರಿಗಳನ್ನು ಖರೀದಿಸಿ ಇಟ್ಟಿದ್ದು,  ಸಂಕಷ್ಟದಲ್ಲಿರುವವರಿಗೆ ವಿತರಿಸಲು ಮುಂದಾಗಿದ್ದಾರೆ.
ಲಾಕ್‍ಡೌನ್‍ನಿಂದ ಜನಸಾಮಾನ್ಯರು ನರಳುತ್ತಿರುವ ಈ ಸಂದರ್ಭದಲ್ಲಿ ನಾನು ಹಜ್ ಯಾತ್ರೆಗೆಂದು ಕೂಡಿಟ್ಟ ಹಣವು ನಮಗೆ ಶಾಪ ಹಾಕದೇ ಇರಲಾರದು. ಈ ಹಣದಿಂದ ಹಜ್ ಯಾತ್ರೆ ಮಾಡುವುದಕ್ಕಿಂತ ಹಸಿವಿನಿಂದಿರುವವರ ಹೊಟ್ಟೆ ತುಂಬಿಸುವುದೇ ಪುಣ್ಯದ ಕೆಲಸ ಎಂಬುದು ಅಬ್ದುಲ್ ರಹ್ಮಾನ್ ಅವರ ಮನಸಿನಲ್ಲಿ ಬಂದದ್ದೇ ತಡ, ಆ ಹಣದಿಂದ ಬಡವರಿಗೆ ವಿತರಿಸಲು ಆಹಾರ ಸಾಮಗ್ರಿಗಳನ್ನು ಖರೀದಿಸಿ ಇಟ್ಟಿದ್ದಾರೆ.
ನನ್ನ ತಂದೆ ಇವತ್ತಿಗೂ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ತಂದೆಗೆ ಒಂದಿಷ್ಟು ಸಹಾಯವಾಗಲಿ ಎಂದು ನನ್ನ ತಾಯಿ ಬೀಡಿ ಕಟ್ಟುತ್ತಿದ್ದಾರೆ. ಒಟ್ಟಿನಲ್ಲಿ ನನ್ನ ಹೆತ್ತವರು ಶ್ರಮ ಜೀವಿಗಳು. ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ನಿರ್ವಹಿಸಬೇಕೆಂಬುದು ನನ್ನ ಪಾಲಕರ ಮಹದಾಸೆ. ಮಕ್ಕಾ, ಮದೀನದ ಕನಸು ಕಾಣುತ್ತಾ, ಹಜ್ ಯಾತ್ರೆಗೆಂದು ಹಲವು ವರ್ಷಗಳಿಂದ ಸ್ವಲ್ಪ ಸ್ವಲ್ಪ ಹಣವನ್ನು ಕೂಡಿಡುತ್ತಾ ಬಂದಿದ್ದಾರೆ. ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿ ಜನಸಾಮಾನ್ಯರು ನರಳುತ್ತಿರುವ ಈ ಸಂದರ್ಭದಲ್ಲಿ ಹಜ್ ಯಾತ್ರೆಗೆ ಕೂಡಿಟ್ಟ ಆ ಹಣವು ನಮಗೆ ಹಿಡಿಶಾಪ ಹಾಕಬಹುದೆಂದು ಮನಗಂಡು ಆ ಹಣದಿಂದ ಹಸಿದವರ ಹೊಟ್ಟೆ ತನಿಸಲು ನನ್ನ ತಂದೆ ತೀರ್ಮಾಣ ಕೈಗೊಂಡಿದ್ದಾರೆ. ಅಲ್ಲಾಹನು ಅವರಿಗೆ ಹಜ್ ನಿರ್ವಹಿಸಿದ ಪುಣ್ಯ ನೀಡಲಿ ಎಂದು ಅಬ್ದುಲ್ ರಹ್ಮಾನ್ ಅವರ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here