ಬೆಂಗಳೂರು: ಕೊರೋನಾ ವೈರಸ್​ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಮೇ.3ರವರೆಗೂ ಲಾಕ್​ಡೌನ್​​ ವಿಸ್ತರಿಸಿ ಆದೇಶಿಸಿದೆ. ಇದರ ನಡುವೇ ಸಿ.ಎಂ. ಬಿ.ಎಸ್.ವೈ.​ ನೇತೃತ್ವದ ಸರ್ಕಾರ ಕೊರೋನಾ ತೀವ್ರತೆ ಕಡಿಮೆಯಾಗುತ್ತಿರುವ ಕಾರಣ ರಾಜ್ಯದ ಕೆಲವು ಭಾಗಗಳಲ್ಲಿ ಇಂದು ಮಧ್ಯ ರಾತ್ರಿಯಿಂದ ಲಾಕ್‌ ಡೌನ್‌ ನಿಯಮದಲ್ಲಿ ಸಡಿಲಿಕೆ ಮಾಡಿ ಆದೇಶಿಸಿದೆ.

ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಂಟೈನ್ಮೆಂಟ್‌ ಝೋನ್‌ ಹೊರತುಪಡಿಸಿ ರಾಜ್ಯದ ಇತರೆ ಭಾಗಗಳಲ್ಲಿ ಕೆಲವೊಂದು ನಿರ್ಬಂಧಗಳೊಂದಿಗೆ ಇಂದು ಮಧ್ಯ ರಾತ್ರಿಯಿಂದ ಲಾಕ್‌ ಡೌನ್‌ ಸಡಿಲಿಕೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಏನಿರುತ್ತೆ.? ಏನಿರಲ್ಲ.? ಇಲ್ಲಿದೆ ಸಂಪೂರ್ಣ ಮಾಹಿತಿ..

ಎಲೆಕ್ಟ್ರಿಷಿಯನ್‌, ಪ್ಲಂಬರ್‌, ಡಾಬಾ, ಕಟ್ಟಡ ನಿರ್ಮಾಣ ಕಾಮಗಾರಿ, ಬಡಗಿ, ಕೊರಿಯರ್‌ ಸೇವೆ, ಲಾರಿ ರಿಪೇರಿ ಮಾಡುವ ಗ್ಯಾರೇಜ್ ಸೇರಿದಂತೆ‌ ಕೆಲವೊಂದು ಅಗತ್ಯ ಸೇವೆಗಳಿಗೆ ಲಾಕ್‌ ಡೌನ್‌ ಸಡಿಲಿಕೆ ನಿರ್ಬಂಧ ಅನ್ವಯಿಸಲಿದೆ. ಕೃಷಿ, ಮೀನುಗಾರಿಕೆಗೆ ಅವಕಾಶ ಸಿಗಲಿದ್ದು, ರಸ ಗೊಬ್ಬರ ಮಾರಾಟದ ಅಂಗಡಿಗಳು ತೆರೆದಿರಲಿವೆ. ಹೋಟೆಲ್‌ ಗಳು ತೆರೆದರೂ ಅಲ್ಲಿಯೇ ಕುಳಿತು ಊಟ-ಉಪಹಾರ ಸೇವಿಸಲು ಅವಕಾಶವಿರುವುದಿಲ್ಲ. ಕೇವಲ ಪಾರ್ಸೆಲ್‌ ಗೆ ಮಾತ್ರ ಅವಕಾಶವಿರುತ್ತದೆ.

ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಮಾರ್ಗಸೂಚಿ ರೂಪಿಸಲಾಗಿದೆ. ಕೃಷಿ ಉಪಕರಣಗಳು ಹಾಗೂ ಬಿಡಿ ಭಾಗಗಳ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಆರೋಗ್ಯ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹಾಲು ಸಂಗ್ರಹ, ವಿತರಣೆ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಲ್‌, ಚಿತ್ರಮಂದಿರ, ಆಟೋ, ವಿಮಾನ, ರೈಲು ಸಂಚಾರ, ಕ್ಯಾಬ್‌ ಮೊದಲಾದ ಸೇವೆಗಳಿಗೆ ಇರುವ ನಿರ್ಬಂಧ ಈ ಹಿಂದಿನಂತೆ ಮುಂದುವರೆಯಲಿದ್ದು, ಧಾರ್ಮಿಕ ಸಭೆ, ಸಮಾರಂಭಗಳ ಹೆಸರಿನಲ್ಲಿ ಸಾರ್ವಜನಿಕರು ಗುಂಪು ಸೇರುವಂತಿಲ್ಲವೆಂದು ಹೇಳಲಾಗಿದೆ. ಕ್ಷೌರದಂಗಡಿಗಳನ್ನು ತೆರೆಯಲು ನಿರ್ಬಂಧಿಸಲಾಗಿದೆ. ಮದ್ಯ ಮಾರಾಟಕ್ಕೆ ಇರುವ ನಿರ್ಬಂಧ ಮೇ 3 ರವರೆಗೆ ಮುಂದುವರೆಯಲಿದ್ದು, ಲಾಕ್‌ ಡೌನ್‌ ಪೂರ್ಣ ಪ್ರಮಾಣದಲ್ಲಿ ತೆರವುಗೊಂಡ ಬಳಿಕವೇ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಲಾಕ್‌ ಡೌನ್‌ ಸಡಿಲಿಕೆ ಮಾಡಿದರೂ ಕೆ.ಎಸ್.ಆರ್.ಟಿ.ಸಿ. ಹಾಗೂ ಬಿಎಂಟಿಸಿ ಬಸ್‌ ಗಳು ರಸ್ತೆಗಿಳಿಯುವುದಿಲ್ಲ. ಮೆಟ್ರೋ ರೈಲಿನ ಸಂಚಾರ ಕೂಡಾ ಇರುವುದಿಲ್ಲವೆಂದು ತಿಳಿಸಲಾಗಿದೆ. ಸ್ವಿಮ್ಮಿಂಗ್‌ ಪೂಲ್‌, ಕ್ಲಬ್‌ ಈ ಮೊದಲಿನಂತೆ ಬಂದ್‌ ಆಗಿರಲಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here