ಬಂಟ್ವಾಳ: ಕೊರೊನಾ ಪಾಸಿಟಿವ್ ಪ್ರಕರಣದಲ್ಲಿ ಬಂಟ್ವಾಳದ ಮಹಿಳೆ ಮೃತಪಟ್ಟ ಹಿನ್ನೆಲೆ ಒಟ್ಟು 34 ಮಂದಿಯನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಅವರು ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಪತ್ರಕರ್ತರೊಂದಿಗೆ ಈ ವಿಷಯ ತಿಳಿಸಿದರು.


ಬಂಟ್ವಾಳದಲ್ಲಿ ಕೊರೋನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ತಾಲೂಕಿನ ಉನ್ನತ ಮಟ್ಟದ ಅಧಿಕಾರಿಗಳ ತುರ್ತು ಸಭೆ ಈ ದಿನ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಜರಗಿತು.
ಮೃತ ಮಹಿಳೆಯ ಕುಟುಂಬದ ಸದಸ್ಯರು, ಸಂಪರ್ಕದಲ್ಲಿರುವವರು ಹಾಗೂ ಸುತ್ತಮುತ್ತಲಿನ ಮನೆಯವರು ಸೇರಿದಂತೆ 28 ಜನರು ಮತ್ತು ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು 6 ಮಂದಿ ಹೀಗೆ ಒಟ್ಟು 34 ಮಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ. ಘಟನೆಯ ಬಳಿಕ ಬಂಟ್ವಾಳದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ‌. ಸೀಲ್ ಡೌನ್ ಅಗಿರುವ ಬಂಟ್ವಾಳ ಪೇಟೆಯ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದ ರೀತಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಅವರಿಗೆ ದಿನಬಳಕೆಯ ವಸ್ತುಗಳನ್ನು ಶಾಸಕರ ವಾರ್ ರೂಂ. ಹಾಗೂ ತಾಲೂಕು ಆಡಳಿತದ ಮೂಲಕ ನೀಡುವ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಎರಡು ದಿನಕ್ಕೊಮ್ಮೆ ಪಿ.ಡಿ.ಒ.ಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಇಲ್ಲಿನ ಪರಿಸ್ಥಿತಿಯ ಅವಲೋಕನ ಮಾಡಲಾಗುವುದು. ಬೀದಿ ಬದಿಯ ವ್ಯಾಪಾರಕ್ಕೆ ಬ್ರೇಕ್ ಹಾಕಿ, ಅಧಿಕಾರಿಗಳು ಸೂಚಿಸಿದ ಮೈದಾನದಲ್ಲಿ ಮಾತ್ರ ತರಕಾರಿ, ಹಣ್ಣು ಹಂಪಲು ಹಾಗೂ ಮೀನು ವ್ಯಾಪಾರಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಈ ಬಗ್ಗೆ ಚರ್ಚೆ ನಡೆದಿದ್ದು, ಬಂಟ್ವಾಳ, ಬಿಸಿರೋಡು, ಮೆಲ್ಕಾರ್ ಮತ್ತು ಕಲ್ಲಡ್ಕದಲ್ಲಿ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪೋಲೀಸರಿಗೆ ಹೆಚ್ಚಿನ ಪವರ್ ನೀಡಲಾಗಿದೆ: 
ಈ ಘಟನೆಯ ಬಳಿಕ ಮುಂದಿನ ಹತ್ತು ದಿನಗಳ ಕಾಲ ಲಾಕ್ ಡೌನ್ ಅವಧಿಯಲ್ಲಿ ಅನಗತ್ಯವಾಗಿ ತಿರುಗಾಟ ಮಾಡುವವರ ಮೇಲೆ ನಿಗಾ ಇಡಿ. ಕಾನೂನು ಕ್ರಮವನ್ನು ಬಿಗಿಗೊಳಿಸಿ ಎಂದು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಅವಧಿಯಲ್ಲಿ ಹೆಚ್ಚು ಅಧಿಕಾರ ಪೋಲೀಸರಿಗೆ ನೀಡಲಾಗಿದೆ ಹಾಗಾಗಿ ಸಾರ್ವಜನಿಕರು ಸಹಕರಿಸುವಂತೆಯೂ ವಿನಂತಿ ಮಾಡಿದ್ದಾರೆ.
ಈಗಾಗಲೇ ಶಾಸಕರ ತಂಡ ಉತ್ತಮವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಟಾಸ್ಕಪೋರ್ಸ್ ಸಮಿತಿಗಳ ಮೂಲಕ ಗ್ರಾಮ ಗ್ರಾಮದ ಸಮಸ್ಯೆಗಳ ಪರಿಹಾರಕ್ಕೆ ತುರ್ತು ಕ್ರಮಕೈಗೊಂಡಿದೆ. ರೇಷನ್ ಕಾರ್ಡ್ ಇಲ್ಲದ ಕುಟುಂಬಗಳಿಗೆ ರೇಷನ್ ನೀಡುವ ಕೆಲಸ ಶಾಸಕರು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಶಾಸಕರು-ಅಧಿಕಾರಿಗಳು ತಂಡ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ತಹಶೀಲ್ದಾರ್ ರಶ್ಮಿ ಎಸ್. ಆರ್‌. ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು, ಡಿ.ವೈ.ಎಸ್.ಪಿ. ವೆಲಂಟೈನ್,ಡಿ.ಸೋಜ, ತಾ.ಪಂ.ಇ.ಒ.ರಾಜಣ್ಣ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here