


ಬಂಟ್ವಾಳ: ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಂಟ್ವಾಳದ ಬಂಗಾರ ಪೇಟೆ ಸೀಲ್ ಡೌನ್ ಅಗಿದೆ.
ಮಳೆಗಾಲದಲ್ಲಿ ನೆರೆ ಬಿಟ್ಟರೆ ಈ ರೀತಿಯಲ್ಲಿ ಸಂಪೂರ್ಣ ಬಂದ್ ಅಗಿರುವ ನಿದರ್ಶನಗಳೇ ಇಲ್ಲ ಅನ್ನುತ್ತಾರೆ ಹಿರಿಯರೊಬ್ಬರು.
ಬಂಟ್ವಾಳ ಪೇಟೆ ನಿವಾಸಿ ಮಹಿಳೆಯೋರ್ವರು ಕೊರೊನಾ ಪ್ರಕರಣದಿಂದ ಮೃತಪಟ್ಟ ಬಳಿಕ ಬಂಟ್ವಾಳ ಪೇಟೆ ಕಂಟೋನ್ಮೆಂಟ್ ಏರಿಯ ಅಂದರೆ ಅ ಮನೆಯ ಸುತ್ತಮುತ್ತಲಿನ 100 ಮೀ. ಪ್ರದೇಶ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಆ ಏರಿಯಾದ ಮನೆಯವರು ಯಾರು ಕೂಡಾ ಮನೆಯಿಂದ ಹೊರಬರುವಂತಿಲ್ಲ. ಉಳಿದ ದಿನಗಳಲ್ಲಿ ಲಾಕ್ ಡೌನ್ ಅವಧಿಯಲ್ಲಿ ಬೆಳಿಗ್ಗೆ ದಿನ ಬಳಕೆಯ ವಸ್ತುಗಳ ಖರೀದಿಸಲು ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಇತ್ತು.
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಂಟ್ವಾಳ ಸಂಪೂರ್ಣ ಸ್ತಬ್ಧವಾಗಿದೆ. ನಿನ್ನೆ ಸಂಜೆಯಿಂದಲೇ ಅರ್ಥಾತ್ ಪೋಲೀಸರ ಅದೇಶ ಬರುವ ಮುಂಚೆಯೇ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು.
ಕೊರೊನಾ ಪಾಸಿಟಿವ್ ಗೆ ಮಹಿಳೆ ಬಲಿಯಾಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ನಿಶಬ್ದವಾಗಿತ್ತು.
ಮುಂದಿನ ಆದೇಶದವರೆಗೂ ದಿನಬಳಕೆಯ ವಸ್ತಗಳಿಗೂ ಜನ ಪೇಟೆಗೆ ಬರುವಂತಿಲ್ಲ. ಅಧಿಕಾರಿಗಳು ಇವರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ಸೀಲ್ ಡೌನ್ ಎಂಬ ಮಾಹಿತಿ ತಿಳಿಯುತ್ತಲೆ ಇಲ್ಲಿನ ನಿವಾಸಿಗಳಿಗೆ ಆತಂಕ ಶುರುವಾಗಿತ್ತು.
ಬಂಟ್ವಾಳ ಪೇಟೆಗೆ ಅಗಮಿಸಿವ ರಸ್ತೆಗಳಾದ ಬಸ್ತಿಪಡ್ಪು, ನೆರೆಪರಿಹಾರ ರಸ್ತೆ, ಜಕ್ರಿಬೆಟ್ಟು ಮತ್ತು ಬೈಪಾಸ್ ನಿಂದ ಪೇಟೆಗೆ ಜಂಕ್ಷನ್ ನಲ್ಲಿ ಪೋಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಜೊತೆಗೆ ಸ್ಥಳದಲ್ಲಿ ಪೋಲೀಸರನ್ನು ನಿಯೋಜಿಸಲಾಗಿದೆ. ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಮುಂಜಾನೆಯಿಂದಲೇ ಪೇಟೆಯಲ್ಲಿ ತಿರುಗಾಟ ನಡೆಸುತ್ತಿದ್ದು, ಜನ ಮನೆಯಿಂದ ಹೊರಬರದಂತೆ ಕ್ರಮಕೈಗೊಂಡಿದ್ದಾರೆ.
ಸೀಲ್ ಡೌನ್ ಅಗಿದೆ ಮುಂದೇನು ಎಂಬ ಚಿಂತೆ ಪೇಟೆಯ ಜನರದ್ದು. ಅವಧಿ ಮುಗಿಯುವರೆಗೆ ಅಧಿಕಾರಿಗಳು ಯಾವ ರೀತಿಯಲ್ಲಿ ಮನೆಗಳಿಗೆ ದಿನಬಳಕೆಯ ವಸ್ತುಗಳ ಪೂರೈಕೆ ಗೆ ಅವಕಾಶ ಮಾಡುತ್ತಾರೆ ಎಂಬುದನ್ನು ಎದುರು ನೋಡುತ್ತಿದ್ದಾರೆ.





