ಕೋಲಾರ: ಕೊರೊನ ನಿಯಂತ್ರಣಕ್ಕಾಗಿ ಬಲಿಷ್ಟ ಕಾರ್ಯಪಡೆ ಹಾಗೂ ಸಮರ್ಥವಾದ ಕ್ರಿಯಾಯೋಜನೆ ಸಿದ್ದಪಡಿಸಿ. ಸದ್ಯ ಗ್ರಾ.ಪಂ. ಚುನಾವಣೆಗಳನ್ನು 2021ರ ಜಿ.ಪಂ., ತಾ.ಪಂ. ಚುನಾವಣೆ ಜತೆಯಲ್ಲೇ ನಡೆಸಲು ನಿಯಮ ರೂಪಿಸಿ ಎಂದು  ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿ, ಕೊರೊನ ತಡೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯಕ್ರಮ ರೂಪಿಸುವಂತೆ ಆಗ್ರಹಿಸಿರುವ ಅವರು, ಬಲಿಷ್ಟ ಕಾರ್ಯಪಡೆ ರಚಿಸಲು ಸಲಹೆ ನೀಡಿದ್ದಾರೆ.
ಕೊರೊನ ಸಂಕಷ್ಟದ ಹಿನ್ನಲೆಯಲ್ಲಿ ಏಪ್ರಿಲ್-2020ರಲ್ಲಿ ನಡೆಸಬೇಕಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದಿನ 2021ರಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆ ಜತೆಯಲ್ಲೇ ನಡೆಸಲು ಕಾನೂನು ತಿದ್ದುಪಡಿ ಮಾಡಲು ಆಗ್ರಹಿಸಿದ್ದಾರೆ.
ಕೊರೊನ ಸಂಪೂರ್ಣ ಲಾಕ್‌ಡೌನ್ ಸಂಕಷ್ಟದಲ್ಲಿ ಜನತೆ, ಸ್ವಯಂಸೇವಾ ಸಂಸ್ಥೆಗಳು, ರಾಜಕೀಯ ಪಕ್ಷಗಳು ಉದಾರವಾಗಿ ಸಹಾಯಹಸ್ತ ಚಾಚುವ ಮೂಲಕ ಸರ್ಕಾರದ ಬೆಂಬಲಕ್ಕೆ ನಿಂತಿವೆ. ಸರ್ಕಾರದ ಮಾರ್ಗದರ್ಶನವನ್ನು ಜನತೆ ಪಾಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಹಲವು ಕಡೆಗಳಲ್ಲಿ ಪ್ರವಾಸದ ಸಂದರ್ಭದಲ್ಲಿ ಪೂರ್ವ ಕಲ್ಪಿತ ಅಭಿಪ್ರಾಯದಂತೆ ಜನರೇ ಹೇಳಿದಂತೆ ತಾರತಮ್ಯವಾಗುತ್ತಿದೆ ಎಂಬ ಆರೋಪಗಳಿದ್ದು, ಇದನ್ನು ಸರಿಪಡಿಸಲು ಕೋರಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯಕ್ಕೆ ಶ್ಲಾಘನೆ
ಮುಖ್ಯಮಂತ್ರಿ ಯಡಿಯೂರಪ್ಪ 78ರ ವಯಸ್ಸಿನಲ್ಲೂ ಶ್ರಮ ವಹಿಸಿ ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಆದರೆ ತಾರತಮ್ಯದಂತಹ ಕೆಲವು ಕೊರತೆಗಳನ್ನು ನೀಗಿಸಬೇಕು ಎಂದರು.
ಕೊರೊನ ವಿರುದ್ದ ಯುದ್ದ ಸಾರಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು, ಮಾಧ್ಯಮದವರು, ಕಂದಾಯ, ಕೆಪಿಟಿಸಿಎಲ್, ನೀರು ಸರಬರಾಜು ನೌಕರರ ಅಗತ್ಯತೆಗಳನ್ನು ಪೂರೈಸಲು ಸರ್ಕಾರ ಮುಂದಾಗಬೇಕು. ಮಾಸ್ಕ್, ಗ್ಲೌಸ್ ಮತ್ತಿತರ ರಕ್ಷಣ ವಸ್ತುಗಳನ್ನು ಯುದ್ದೋಪಾದಿಯಲ್ಲಿ ಒದಗಿಸಬೇಕು ಇಲ್ಲವಾದಲ್ಲಿ ಅವರಲ್ಲಿ ಉತ್ಸಾಹ ಕುಂದಲು ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಆರ್ಥಿಕ ಪರಿಸ್ಥಿತಿಗೆ ವಿವೇಕಯುತ ನಡೆ
ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಬದುಕು, ಜೀವನಕ್ಕೆ ಅನಾನುಕೂಲವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯೂ ದುರ್ಬಲವಾಗುವ ಅಪಾಯ ಗೋಚರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಜಾಗರೂಕತೆ, ವಿವೇಕಯುತವಾದ ಸಾಧ್ಯಾ ಸಾಧ್ಯತೆಗಳನ್ನು ಕಾರ್ಯಗತಗೊಳಿಸುವ ಅಗತ್ಯವಿದೆ ಎಂದರು. ಬಡವರು, ದಿನಗೂಲಿ ನೌಕರರು, ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಅಗತ್ಯ ನೆರವು ಒದಗಿಸಬೇಕಾಗಿದೆ. ವಿವಿಧ ವೃತ್ತಿಗಳಲ್ಲಿ ತೊಡಗಿದವರ ಕಷ್ಟಕ್ಕೂ ಆಧ್ಯತೆಯ ಮೇರೆಗೆ ಆರ್ಥಿಕ ನೆರವು ಒದಗಿಸಬೇಕು ಎಂದರು.
ರೈತರ ಬೆಳೆಗಳಿಗೆ ಯೋಗ್ಯ ಬೆಲೆ, ಮಾರುಕಟ್ಟೆ ಸಿಗುವಂತೆ ಮಾಡಿ, ಹಾಪ್‌ಕಾಮ್ಸ್, ಎಪಿಎಂಸಿಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಬೇಕು ಎಂದರು.
ಆಕ್ರಮಣಕಾರಿ ರೀತಿ ಕರೋನಾ ಪರೀಕ್ಷೆ
ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯಂತೆ ಆಕ್ರಮಣಕಾರಿಯಾಗಿ ಕೊರೊನ ಪರೀಕ್ಷೆ ನಡೆಸಬೇಕು. ಇದಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ರಾಜ್ಯ ವ್ಯಾಪ್ತಿ ಸಾಮೂಹಿಕ ಪರೀಕ್ಷೆ ನಡೆಸುವಂತಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ಧಾರೆ. ರಾಜ್ಯ ಮತ್ತು ಜನರ ಹಿತ ದೃಷ್ಟಿಯಿಂದ ತಮ್ಮ ಸಂಪುಟದಲ್ಲಿನ ಕೆಲವು ಸಚಿವರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡುವಂತೆ ಮಾಡಿ ಎಂದು ಸಲಹೆ ನೀಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here