


ಬಂಟ್ವಾಳ: ಕೊರೊನಾ ವೈರಸ್ ಸೊಂಕು ಹರಡುವ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರ ತೆಗೆದುಕೊಂಡ ಮಹತ್ವದ ನಿರ್ಣಯ ಲಾಕ್ ಡೌನ್. ಖಂಡಿತವಾಗಿಯೂ ಲಾಕ್ ಡೌನ್ ನಿಂದಾಗಿ ಕೊರೊನಾ ಕಂಟ್ರೋಲ್ ಗೆ ಬರುತ್ತಿದೆ ಎಂಬುದು ವಾಸ್ತವಿಕ ವಿಚಾರ. ಅದರೆ ಇಲ್ಲೇನಪ್ಪ ವಿಚಾರ ಅಂದರೆ ಲಾಕ್ ಡೌನ್ ನಿಂದಾಗಿ ಅನೇಕ ರಸ್ತೆ ಕಾಮಗಾರಿ ಸಹಿತ ಅನೇಕ ಸರಕಾರಿ ಕಾಮಗಾರಿಗಳು ನಿಂತಿದೆ.
ಅದರಲ್ಲಿ ಬಂಟ್ವಾಳ- ಕಡೂರು ರಸ್ತೆ ಕಾಮಗಾರಿ:
ಬಿ.ಸಿ.ರೋಡನಿಂದ ಪುಂಜಾಲಕಟ್ಟೆ ವರಗೆ 159 ಕೋಟಿ ವೆಚ್ಚದಲ್ಲಿ ಸುಮಾರು 19 ಕಿ.ಮೀ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿತ್ತು. ಈ ವರ್ಷದ ಮಳೆಗಾಲ ಆರಂಭದ ಮೊದಲು ರಸ್ತೆಯನ್ನು ಸಂಚಾರಕ್ಕೆ ಅವಕಾಶ ನೀಡುವುದಾಗಿಯೂ ಭರವಸೆ ನೀಡಿದ್ದರು. ಆದರೆ ಕೊರೊನಾ ಲಾಕ್ ಡೌನ್ ಇವರ ಕಾಮಗಾರಿಗೆ ಬ್ರೇಕ್ ಹಾಕಿತ್ತು. ಸಮಸ್ಯೆ ಆರಂಭವಾದದ್ದು ಅಲ್ಲಿಂದಲೇ. ಲಾಕ್ ಡೌನ್ ನಿಂದಾಗಿ ಕಾಮಗಾರಿ ನಿಂತಿತ್ತು. ಆದರೆ ಇಂದಿನಿಂದ ಮತ್ತೆ ತಡೆಗೋಡೆ ಕಾಮಗಾರಿಗಳ ಸಹಿತ ಸಣ್ಣಪುಟ್ಟ ರಸ್ತೆಯ ಕಾಮಗಾರಿಗಳಿಗೆ ವೇಗ ದೊರೆತಿದೆ.
ಆದರೆ ಮಳೆ ಆರಂಭವಾದ್ದರಿಂದ ಕಾಮಗಾರಿ ಅತೀ ವೇಗವಾಗಿ ಮುಗಿಯಬೇಕಾಗಿದೆ. ಇಲ್ಲದೆ ಹೋದರೆ ರಸ್ತೆ ಬದಿಯಲ್ಲಿರುವ ಮನೆಗಳಿಗೆ, ಅಂಗಡಿಗಳಿಗೆ ಮಳೆ ನೀರು ನುಗ್ಗುವುದು ಗ್ಯಾರಂಟಿ ಅದಕ್ಕೆ ಅನುಮಾನವೇ ಬೇಡ. ಯಾಕೆಂದರೆ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಅನೇಕ ಮನೆಗಳು, ಅಂಗಡಿಗಳು ರಸ್ತೆಯಿಂದ ಕೆಳಭಾಗದಲ್ಲಿರುವುದರಿಂದ ನೀರು ನುಗ್ಗುವ ಆತಂಕದಲ್ಲಿ ಜನರು ಇದ್ದಾರೆ.
ಕೆಲವೆಡೆಗಳಲ್ಲಿ ಕೃಷಿ ಭೂಮಿಗೂ ನೀರು ನುಗ್ಗುವ ಅವಕಾಶಗಳಿವೆ. ಹಾಗಾಗಿ ಮಳೆಗಾಲ ಆರಂಭವಾಗುವ ಮೊದಲೇ ಕಾಮಗಾರಿ ಮುಗಿಸಲು ಸಾಧ್ಯವಾಗದಿದ್ದರೆ ಕನಿಷ್ಟ ಪಕ್ಷ ಚರಂಡಿ ನಿರ್ಮಿಸಿ ಮಳೆ ನೀರು ಮನೆಯಂಗಳಕ್ಕೆ ನುಗ್ಗದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಕೆಲವು ಕಡೆಗಳಲ್ಲಿ ರಸ್ತೆಯಲ್ಲಿರುವ ಚರಂಡಿಗಳನ್ನು ಮುಚ್ಚಲಾಗಿ ಅಡ್ಡಲಾಗಿ ಮಣ್ಣು ರಾಶಿ ಹಾಕಲಾಗಿದೆ. ಇದರಿಂದ ಮನೆಯೊಳಗೆ ನೀರು ನುಗುತ್ತದೆ ಎಂಬ ಆರೋಪದ ಜೊತೆಯಲ್ಲಿ ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ನೀರು ನುಗ್ಗಿದರೆ ಮನೆಯನ್ನು ಕಳೆದುಕೊಂಡು ಬೀದಿಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗಬಹುದು ಅದಕ್ಕೆ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.





