


ಬಂಟ್ವಾಳ : ಕೊರೊನಾ ಮಹಾಮಾರಿಯಿಂದ ದೇಶದಾದ್ಯಂತ ಲಾಕ್ಡೌನ್ನಿಂದಾಗಿ ದೇವಸ್ಥಾನಗಳೂ ಬಾಗಿಲು ಮುಚ್ಚಿವೆ. ದೇಗುಲಕ್ಕೆ ಆಗಮಿಸುವ ಭಕ್ತಾಧಿಗಳಿಂದ ಆಹಾರ ಪಡೆಯುತ್ತಿದ್ದ ಪ್ರಾಣಿ ಪಕ್ಷಿಗಳಿಗೂ ಆಹಾರದ ಸಮಸ್ಯೆ ಕಾಡುತ್ತಿದೆ.
ಇತಿಹಾಸ ಪ್ರಸಿದ್ಧ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ವಾನರರಿಗೆ ಪ್ರಸಿದ್ಧಿಯಾಗಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಈ ಕೋತಿಗಳ ಆಟ ನೋಡಿ ಸಂತಸ ಪಡದವರಿಲ್ಲ. ಹಣ್ಣುಕಾಯಿಯ ಬಾಳೆಹಣ್ಣು , ತೆಂಗಿಕಾಯಿಯೂ ಈ ವಾನರರಿಗೆ ಮೀಸಲು. ಒಮ್ಮೊಮ್ಮೆ ಮಕ್ಕಳು, ಮಹಿಳೆಯರ ಕೈಯಿಂದ ಬ್ಯಾಗ್ ಎಳೆದು ಆಹಾರಕ್ಕಾಗಿ ಕಾಡುವುದೂ ಉಂಟು! ಆದರೆ ಈಗ ಭಕ್ತರಿಲ್ಲದೆ ಈ ಕಪಿಗಳಿಗೆ ಆಹಾರದ ಕೊರತೆಯಾಗಿದೆ.
ವಾನರ ನೈವೇದ್ಯ!
ಇಲ್ಲಿ ಗುಡ್ಡದ ಮೇಲಿರುವ ಶ್ರೀ ಕಾರಿಂಜೇಶ್ವರನ ನೈವೇದ್ಯ ಶ್ರೀ ರಾಮನ ಸೈನಿಕರಾದ ವಾನರರಿಗೆ ಅರ್ಪಿತವಾಗುತ್ತದೆ. ಈ ವಾನರರಿಗೆ ಆಹಾರದ ಹರಕೆ ಹೇಳಿದರೆ ಕೋತಿಗಳ ಉಪದ್ರವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಶ್ರೀ ಕಾರಿಂಜೇಶ್ವರನ ದೇವಸ್ಥಾನದ ಪ್ರಾಕಾರ ಗೋಡೆಯ ಬಳಿ ದೊಡ್ಡ ಕಲ್ಲು ಚಪ್ಪಡಿ ಇದೆ. ಇದುವೇ ವಾನರರ ನೈವೇದ್ಯದ ಸ್ಥಳ. ಪ್ರತೀ ಮಧ್ಯಾಹ್ನ ದೇವರಿಗೆ ಪೂಜೆಯಾದ ಬಳಿಕ ಮೂರು ಸೇರು ಅಕ್ಕಿಯ ದೇವರ ನೈವೇದ್ಯವನ್ನು ಈ ಕಲ್ಲಿನ ಮೇಲೆ ವಾನರರಿಗೆ ಅರ್ಪಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ನೂರಾರು ಕಪಿಗಳು ಹಾರಿ ಬಂದು ನೈವೇದ್ಯ ತಿನ್ನುತ್ತದೆ. ಈ ಹಿಂದೆ ಇಲ್ಲಿ ದೊಡ್ಡ ಕೋತಿಯೊಂದಿದ್ದು, ಕಾರಿಂಜದ ದಡ್ಡ ಎಂದೇ ಹೆಸರು ಪಡೆದಿತ್ತು.
ಶ್ರೀ ರಾಮ ಭಕ್ತ, ವಾನರ ಶ್ರೇಷ್ಠ ಆಂಜನೇಯನ ಹುಟ್ಟು ಇದೇ ಕಾರಿಂಜದಲ್ಲಿ ಎಂಬ ಪ್ರತೀತಿ ಇದೆ. ರಾವಣ ವಧೆ ಬಳಿಕ ಸಪರಿವಾರ ಸಹಿತ ಅಯೋಧ್ಯೆಯತ್ತ ತೆರಳುವಾಗ ಕಾರಿಂಜೆಗೆ ಬಂದಿದ್ದರೆಂದೂ ಹನುಮಂತನ ಹುಟ್ಟೂರಿನಲ್ಲಿ ನೆಲೆಯೂರಲು ಕಪಿ ವೀರರು ನಿರ್ಧರಿದ್ದರೆಂದೂ ಆದುದರಿಂದ ಇಲ್ಲಿ ವಾನರರಿಗೆ ನೈವೇದ್ಯ ಕೊಡುವ ಸಂಪ್ರದಾಯ ಬೆಳೆದಿದೆ ಎಂದು ಪುರಾಣೈತಿಹ್ಯದಿಂದ ತಿಳಿದು ಬರುತ್ತದೆ.
ಪ್ರಸ್ತುತ ಈ ಕೋತಿಗಳಿಗೆ ಸಂಪ್ರದಾಯದಂತೆ ಅರ್ಚಕರು ನೈವೇದ್ಯ ಅರ್ಪಿಸುತ್ತಾರೆ. ಆದರೆ ಕೋತಿಗಳು ನೂರಾರು ಸಂಖ್ಯೆಯಲ್ಲಿರುವುದರಿಂದ ಇದು ಸಾಕಾಗುವುದಿಲ್ಲ. ಆಹಾರಕ್ಕಾಗಿ ಕಾದು ಕುಳಿಯುತ್ತಾವೆ.
ಇಲ್ಲಿನ ಮೆನೇಜರ್ ಸತೀಶ್ ಪ್ರಭು ಅವರು ಸಂಜೆ ಹೊತ್ತು ಸ್ವಲ್ಪ ಆಹಾರ ಸಿದ್ದಪಡಿಸಿ ನೀಡುತ್ತಾರೆ. ಭಕ್ತರಿಂದ ಹೆಚ್ಚಾಗಿ ಬಾಳೆಯ ಹಣ್ಣು ಪಡೆಯುತ್ತಿದ್ದ ಕೋತಿಗಳು ಎಡತಾಕುತ್ತವೆ. ಭಕ್ತರು ಬಾಳೆಗೊನೆ ನೀಡಿದಲ್ಲಿ ಕೋತಿಗಳಿಗೆ ಅರ್ಪಿಸಬಹುದು ಎನ್ನುತ್ತಾರೆ ಸತೀಶ್.





