Wednesday, October 18, 2023

ಹೊಸ ಮಾರ್ಗಸೂಚಿಯಂತೆ ಕಾರ್ಯಚರಣೆಗಿಳಿದ ಪೋಲೀಸರು

Must read

ಮೆಡಿಕಲ್ ಗೆ ಬರುತ್ತೀರಾ ಯಾಕೆ ಇಬ್ಬರು ಬರುತ್ತೀರಿ, ಅವಶ್ಯ ಸಾಮಾಗ್ರಿನಾ ಹಾಗಾದರೆ ಯಾಕೆ ಮೂವರು ಬರುತ್ತೀರಾ? ಇನ್ನು ಮುಂದೆ ಲಾಕ್ ಡೌನ್ ಅವಧಿಯಲ್ಲಿ ಈ ರೀತಿಯಲ್ಲಿ ಬಂದರೆ ವಾಹನ ಠಾಣೆಯಲ್ಲಿರುತ್ತೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದು ಮಂಗಳೂರು ಎಡಿಶನಲ್ ಎಸ್.ಪಿ.ಡಾ. ವಿಕ್ರಂ ಅಮ್ಟೆ. 

ಬಂಟ್ವಾಳ: ಮಂಗಳೂರು ಎಡಿಶನಲ್  ಎಸ್.ಪಿ. ಡಾ. ವಿಕ್ರಮ್ ಅಮ್ಟೆ ಅವರಿಂದ ಬಿಸಿರೋಡಿನಲ್ಲಿ ಕೆಲಹೊತ್ತು ವಾಹನಗಳ ಪರಿಶೀಲನೆ ಕಾರ್ಯ ನಡೆಯಿತು. ಲಾಕ್ ಡೌನ್ ಅವಧಿಯಲ್ಲಿ ಅನಾವಶ್ಯಕ ತಿರುಗಾಟ ಬೇಡ ಎಂದು ವಾಹನ ಸವಾರರಿಗೆ ಕಿವಿ ಮಾತು ಹೇಳಿದರು.

ಕೋವಿಡ್ -19ರ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಮತ್ತೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ 12 ಗಂಟೆ ಅವಧಿಯಲ್ಲಿ ಕೇವಲ ಸುತ್ತಾಟಕ್ಕೆ ಬರುವವರಷ್ಟೇ ಅಲ್ಲ, ಸ್ವಂತ ವಾಹನಗಳಲ್ಲಿ ಔಷಧ ವಸ್ತು ಖರೀದಿ, ಬ್ಯಾಂಕುಗಳಿಗೆ ಬರುವವರೂ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಬಿ.ಸಿ.ರೋಡ್ ಫ್ಲೈಓವರ್ ಅಡಿಯಲ್ಲಿ ನಿಂತಿದ್ದ ಪೊಲೀಸರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ತುರ್ತು ವಿಷಯಗಳಾದ ಮೆಡಿಕಲ್, ವೆಟರ್ನರಿ ಕೇರ್, ಅಗತ್ಯ ವಸ್ತುಗಳ ಖರೀದಿ ಇದ್ದರೆ, ಖಾಸಗಿ ವಾಹನಗಳಲ್ಲಿ ಹಿಂದಿನ ಸೀಟಿನಲ್ಲಿ ಒಬ್ಬರಷ್ಟೇ ಕುಳಿತುಕೊಳ್ಳಲು ಅವಕಾಶವಿದೆ. ದ್ವಿ ಚಕ್ರ ವಾಹನವಾದರೆ ಸವಾರನಿಗಷ್ಟೇ ಅವಕಾಶ ಎಂದು ಭಾರತ ಸರಕಾರದ ಗೃಹ ಸಚಿವಾಲಯ ಏ.15ರಂದು ಹೊರಡಿಸಿದ ಆದೇಶದಲ್ಲಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸೂಚನೆಗಳ ಅರಿವಿಲ್ಲದವರು, ಬ್ಯಾಂಕು ಮತ್ತಿತರ ಕಡೆಗಳಿಗೆ ಬಂದವರೂ ಪೊಲೀಸರ ತಡೆಗೆ ಒಳಪಟ್ಟರು. ಬಳಿಕ ಎಡಿಶನಲ್ ಎಸ್ಪಿ ವಿಕ್ರಮ್ ಆಮ್ಟೆ ಸ್ಥಳಕ್ಕಾಗಮಿಸಿ ಸಮಸ್ಯೆಯನ್ನರಿತು ಕೆಲವರಿಗೆ ಸೂಚನೆ ನೀಡಿ ಕಳುಹಿಸಿದರು.

ಕಾರ್ಯಾಚರಣೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಎಸ್.ಐ.ಅವಿನಾಶ್, ಅಪರಾಧ ವಿಭಾಗ ಎಸ್.ಐ. ಸಂತೋಷ್, ಪ್ರೋ.ಎಸ್.ಐ. ಮಲ್ಲಿಕಾರ್ಜುನ ಕೊರಾಣಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಬುಧವಾರ ಬಂಟ್ವಾಳ ಪೊಲೀಸರು ವಶಪಡಿಸಿಕೊಂಡ ವಾಹನಗಳಿಂದ ಸರಕಾರದ ಖಜಾನೆ ಭರ್ತಿ ಮಾಡಿದರೆ, ಖರೀದಿಗೆಂದು ಅಂಗಡಿ, ಮುಂಗಟ್ಟು ಅಲೆಯುತ್ತಿದ್ದವರು ಪರದಾಟವನ್ನೂ ಅನುಭವಿಸಬೇಕಾಯಿತು.

More articles

Latest article