ನವದೆಹಲಿ: ಕೊರೋನಾ ಭೀತಿ ಹಿನ್ನೆಲೆ ಏ.14ರ ವರೆಗೆ ಪ್ರಧಾನಿ ಲಾಕ್ ಡೌನ್ ಘೋಷಿಸಿದ್ದಾರೆ. ಇನ್ನು ಲಾಕ್ಡೌನ್ ಅವಧಿಯ ವಿಸ್ತರಣೆ ಮಾಡಬೇಕೇ, ಬೇಡವೇ ಎಂಬುದರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏ.14) ಬೆಳಗ್ಗೆ 10 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಟ್ವಿಟರ್ ತಿಳಿಸಿದೆ.
ನಾಳೆ ಮುಗಿಯಲಿದ್ದ ಲಾಕ್ಡೌನ್ ಅವಧಿಯನ್ನು ಈಗಾಗಲೇ ಕರ್ನಾಟಕ, ಒಡಿಶಾ ಹಾಗೂ ಪಂಜಾಬ್ ರಾಜ್ಯಗಳು ಏಪ್ರಿಲ್ 30ರವರೆಗೆ ಮುಂದುವರೆಸಿವೆ. ಆದರೆ ಈ ಬಗ್ಗೆ ಇದುವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಬಂದಿಲ್ಲ. ಆದರೆ ಉಳಿದ ರಾಜ್ಯಗಳು ಕೇಂದ್ರದ ಆದೇಶಕ್ಕಾಗಿ ಕಾಯುತ್ತಲಿದೆ. ಆದ್ದರಿಂದ ಎಲ್ಲಾ ರಾಜ್ಯಗಳ ಲಾಕ್ಡೌನ್ ಭವಿಷ್ಯಕ್ಕೆ ನಾಳೆ ತೆರೆ ಬೀಳಲಿದೆ.
ಈಗಾಗಲೇ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ದೂರವಾಣಿ ಕರೆ ಮತ್ತು ವೀಡಿಯೋ ಕಾನ್ಫರೆನ್ಸ್ ಮೂಲಕ ಲಾಕ್ಡೌನ್ಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ವಿವಿಧ ಕ್ಷೇತ್ರಗಳ ತಜ್ಞರು, ವಿವಿಧ ಪಕ್ಷಗಳ ಮುಖಂಡರ ಜತೆಗೂ ದೀರ್ಘ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಬಂದಿರುವ ಅಭಿಪ್ರಾಯಗಳ ಆಧಾರದ ಮೇಲೆ ಲಾಕ್ಡೌನ್ ಕುರಿತು ನಾಳೆ ಪ್ರಧಾನಿ ಮಾತನಾಡಲಿದ್ದಾರೆ.