



ಬಂಟ್ವಾಳ: ಕೊರೊನಾ ಭೀತಿಯ ಜೊತೆಯಲ್ಲಿ ಮೂರ್ಜೆಯ ಜನರಿಗೆ ಕಳೆದ ಎರಡು ದಿನಗಳಿಂದ ಚಿರತೆಯ ಭಯ ಶುರುವಾಗಿದೆ. ಮೂರ್ಜೆಯ ಹೆದ್ದಾರಿಯ ಮೂಲಕ ಚಿರತೆ ರಾತ್ರಿ 8.30ರ ವೇಳೆ ರಾಜರೋಷವಾಗಿ ನಡೆದುಕೊಂಡು ಬರುವ ದೃಶ್ಯವನ್ನು ಕಣ್ಣಾರೆ ಕಂಡ ಜನ ಭಯ ಬೀತರಾಗಿದ್ದಾರೆ. ಚಿರತೆಯ ಮೂರ್ಜೆ ರಸ್ತೆಯ ಮೂಲಕ ಬಂದು ಬಳಿಕ ಪೆಟ್ರೋಲ್ ಪಂಪ್ ನ ಸನಿಹ ಗುಡ್ಡೆಕ್ಕೆ ಹತ್ತಿ ಹೋಗಿರುವ ದೃಶ್ಯ ಸ್ಥಳೀಯ ಸಂತೋಷ್ ಮೂರ್ಜೆಯ ವರ ಮನೆಯ ಸಿ.ಸಿ.ಕ್ಯಾಮರಾದಲ್ಲೂ ರೆಕಾರ್ಡ್ ಅಗಿದೆ. ಅ ಬಳಿಕ ಸ್ಥಳೀಯ ಗ್ರಾ.ಪಂ.ಸದಸ್ಯೆ ವಸಂತಿ ಎಂಬವರ ಮನೆಯಂಗಳದಲ್ಲಿ ಅವರಿಗೆ ಕಾಣಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ. ಬಳಿಕ ಮೂರು ಗಂಟೆಯ ವೇಳೆಗೆ ಅಲ್ಲೇ ಸಮೀಪದ ಇನ್ನೊಂದು ಮನೆಯ ಬಳಿಯಿರುವ ಬಾವಿಯಲ್ಲಿ ನೀರು ಕುಡಿದು ವಾಪಾಸು ಹೋಗಿರುವುದನ್ನು ಕಂಡಿದ್ದಾರೆ ಎಂದು ಹೇಳಲಾಗಿದೆ.
ಮೂರ್ಜೆ ಭಾಗದ ವ್ಯಕ್ತಿಯೋರ್ವರ ನಾಯಿ ನಾಪತ್ತೆಯಾಗಿದ್ದು ಚಿರತೆ ಕೊಂಡುಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಅದಕ್ಕೂ ಮುಂಚಿನ ದಿನ ಶನಿವಾರ ಮುಂಜಾನೆ ವೇಳೆ ಮೂರ್ಜೆಯ ನೆಕ್ಕಿದರವು ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ಕಾರ್ಮಿಕ ನನ್ನು ಅಟ್ಟಿಸಿಕೊಂಡು ಬಂದಿದೆ ಎಂದು ಹೇಳುತ್ತಾರೆ.
ಅಧಿಕಾರಿಗಳು ಭೇಟಿ:
ಮೂರ್ಜೆಯ ರಸ್ತೆಯ ಮೂಲಕ ಸಂಚಾರ ಮಾಡುತ್ತಿದ್ದ ಚಿರತೆಯನ್ನು ನೋಡಿದ ಸ್ಥಳೀಯರು ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವೇಣೂರು ಅರಣ್ಯಾಧಿಕಾರಿ ಸುನಿಲ್ ಕುಮಾರ್ ಹಾಗೂ ಅವರ ತಂಡ ತಡ ರಾತ್ರಿವರೆಗೂ ಕಾರ್ಯಚರಣೆ ನಡೆಸಿದ್ದರು. ಆದರೂ ಚಿರತೆಯ ಸುಳಿವು ಸಿಕ್ಕಿಲ್ಲ. ಕಳೆದ ಎರಡು ದಿನಗಳಿಂದ ರಾಜರೋಷವಾಗಿ ತಿರುಗುತ್ತಿರುವ ಚಿರತೆ ಜನರಿಗೆ ದಾಳಿ ನಡೆಸಬಹುದೇ ಎಂಬ ಭಯ ಶುರುವಾಗಿದೆ.






