ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಬಳಕೆಯಾಗುತ್ತಿರುವ ಒಂದು ಶಬ್ಧವೆಂದರೆ “ಹಿಂಡು ಪ್ರತಿಬಂಧಕತೆ ಅಥವಾ ಆಂಗ್ಲಭಾಷೆಯಲ್ಲಿ ಹೇಳುವುದಾದರೆ “Herd Immunity” ಕೆಲವೊಮ್ಮೆ ಜನಾಂಗದ ಪ್ರತಿಬಂಧಕತೆ, ಸಾಮಾಜಿಕ ಪ್ರತಿಬಂಧಕತೆ ಎಂಬುದಾಗಿ ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ. ಒಬ್ಬ ವ್ಯಕ್ತಿ ಲಸಿಕೆ ಮುಖಾಂತರ ಕೆಲವೊಂದು ರೋಗಗಳಿಗೆ ನಿರೋಧಕತೆ ಪಡೆದುಕೊಳ್ಳುವ ಅವಕಾಶವಿದೆ ಅಥವಾ ಯಾವುದಾದರೂ ಸೋಂಕು ರೋಗ ತಗುಲಿದಾಗ, ದೇಹ ಆ ರೋಗಾಣುವಿನ ವಿರುದ್ಧ ಆಂಟಿಬಾಡಿಗಳನ್ನು ತಯಾರಿಸಿಕೊಂಡು ಮಗದೊಮ್ಮೆ ರೋಗ ಬರದಂತೆ ರೋಗ ಪ್ರತಿಬಂಧಕತೆಯನ್ನು ಪಡೆಯುತ್ತಾರೆ. ಆದರೆ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟ ವ್ಯಕ್ತಿಗಳಲ್ಲಿ ಈ ರೀತಿಯ ಪ್ರತಿಬಂಧಕತೆ ಬರುವುದಿಲ್ಲ. ಇಂತಹಾ ವ್ಯಕ್ತಿಗಳಿಗೆ “ಹಿಂಡು ಪ್ರತಿಬಂಧಕತೆ” ಬಹಳ ಪ್ರಯೋಜನಕಾರಿ ಒಂದು ಸಮುದಾಯದ ಅಥವಾ ಒಂದು ಭೌಗೋಳಿಕ ಪ್ರದೇಶದ ಬಹಳಷ್ಟು ಮಂದಿ ಒಂದು ನಿರ್ದಿಷ್ಟ ರೋಗಕ್ಕೆ ಪ್ರತಿಬಂಧಕತೆ ಬೆಳೆಸಿಕೊಂಡಾಗ, ಆ ಸಾಂಕ್ರಾಮಿಕ ರೋಗ ಹರಡುವ ಶಕ್ತಿ ಕುಂಠಿತವಾಗಿ, ರೋಗನಿರೋಧಕತೆ ಶಕ್ತಿ ಕುಂಠಿತವಾದವರಿಗೂ ರಕ್ಷಣೆ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಅದನ್ನೇ ಹಿಂಡು ಪ್ರತಿಬಂಧಕತೆ ಎನ್ನಲಾಗುತ್ತದೆ. ಇದೊಂದು ರೀತಿಯ ಪರೋಕ್ಷವಾದ ರಕ್ಷಣೆ ಎಂದರೂ ತಪ್ಪಾಗಲಾರದು. ಒಂದು ನಿರ್ದಿಷ್ಟ ಜನಾಂಗದ ಅಥವಾ ಭೌಗೋಳಿಕ ಪ್ರದೇಶದ ಹೆಚ್ಚಿನ ಜನರು ಯಾವುದಾದರೊಂದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ರೋಗ ಪ್ರತಿರೋಧಕತೆ ಪಡೆದಲ್ಲಿ ಅಥವಾ ಲಸಿಕೆ ಮುಖಾಂತರ ರಕ್ಷಣೆ ಪಡೆದಲ್ಲಿ ಆ ಪ್ರದೇಶದ ಅಥವಾ ಜನಾಂಗದ ಉಳಿದ ಸಣ್ಣ ಪ್ರಮಾಣದ ಜನರೂ ಆ ಸಾಂಕ್ರಾಮಿಕ ರೋಗಕ್ಕೆ ಪ್ರತಿಬಂಧಕತೆಯನ್ನು ಸುಲಭವಾಗಿ ಬೆಳೆಸಿಕೊಳ್ಳುತ್ತಾರೆ. ಅವರಿಗೆ ಅವರ ದೇಹದ ರಕ್ಷಣಾ ವ್ಯವಸ್ಥೆ ಸರಿಯಾಗಿಲ್ಲದಿದ್ದರೂ ಆ ಜನಾಂಗದ ಉಳಿದ ರೋಗ ಪ್ರತಿಬಂಧಕತೆ ಬೆಳೆಸಿಕೊಂಡ ಮಂದಿ ರೋಗ ಹರಡದಂತೆ ಮಾಡಿ ಪರೋಕ್ಷವಾಗಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಯುತ್ತದೆ. ಈ ನಿಟ್ಟಿನಲ್ಲಿ ಒಂದು ಜನಾಂಗದ ಅಥವಾ ಭೌಗೋಳಿಕ ಪ್ರದೇಶದ ಆರೋಗ್ಯಪೂರ್ಣ ಜನರು ಹೆಚ್ಚು ಸಾಂಕ್ರಾಮಿಕ ರೋಗಕ್ಕೆ ತುತ್ತಾದಾಗ ಅವರು ತಮ್ಮ ದೇಹದಲ್ಲಿ ಪ್ರತಿರೋಧಕತೆ ಬೆಳೆಸಿಕೊಂಡು ಇಡೀ ಸಮುದಾಯವನ್ನೇ ರಕ್ಷಿಸುವ ಸಾಮಥ್ರ್ಯ ಪಡೆಯುತ್ತಾರೆ. ಯಾವಾಗ ಇಂತಹಾ ವ್ಯಕ್ತಿಗಳ ಸಂಖ್ಯೆ ಜಾಸ್ತಿಯಾಗುತ್ತದೆಯೋ, ಅಂತಹಾ ಸಮುದಾಯದ ಜನರು ಹೆಚ್ಚು ಹೆಚ್ಚು ಸುರಕ್ಷಿತರಾಗುತ್ತಾರೆ. ಇದನ್ನೇ ವೈಜ್ಞಾನಿಕವಾಗಿ ‘ಹಿಂಡು ಪ್ರತಿಬಂಧಕತೆ’ ಎನ್ನಲಾಗುತ್ತದೆ. ಒಂದು ಭೌಗೋಳಿಕ ಅಥವಾ ಜನಾಂಗದ ನಿರ್ದಿಷ್ಟ ಸಂಖ್ಯೆಯ ಬಹುಪಾಲು ಮಂದಿ ಹಿಂಡು ಪ್ರತಿಬಂಧಕತೆ ಬೆಳೆಸಿಕೊಂಡಾಗ ಆರೋಗ ತನ್ನಿಂತಾನೇ ನಿಯಂತ್ರಣಕ್ಕೆ ಬರುತ್ತದೆ. ಕ್ರಮೇಣ ಆ ರೋಗ ನಶಿಸಿ ಹೋಗುತ್ತದೆ. ರೋಗದ ಸಂಖ್ಯೆ ಸೊನ್ನೆ ತಲುಪಿದಾಗ ಅದನ್ನು ರೋಗ ನಿರ್ನಾಮವಾಗಿದೆ ಎನ್ನಲಾಗುತ್ತದೆ. ಇದಕ್ಕೆ ಶಾಸ್ತ್ರೀಯವಾದ ಉದಾಹರಣೆಯೆಂದರೆ ಸಿಡುಬು ರೋಗ ಎಂಬ, ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗ. 1977ರಲ್ಲಿ ಲಸಿಕೆಗಳ ಮುಖಾಂತರ ಹಿಂಡು ಪ್ರತಿಬಂಧಕತೆ ಬರುವಂತೆ ಮಾಡಿ Small Pox ರೋಗವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಯಿತು. ಈ ರೀತಿಯ ಹಿಂಡು ಪ್ರತಿಬಂಧಕತೆ ಕೇವಲ ಒಬ್ಬನಿಂದ ಇನ್ನೊಬ್ಬ ಮನುಷ್ಯನಿಗೆ ಹರಡುವ ಸಾಂಕ್ರಾಮಿಕ ರೋಗಗಳಿಗೆ ಮಾತ್ರ ಅನ್ವಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದುಗದ್ದಲ ಮಾಡಿ, ಸಾವು ನೋವುಗಳಿಗೆ ಕಾರಣವಾಗುತ್ತಿರುವ ಕೋವಿಡ್-19 ಎಂಬ ವೈರಾಣುವಿನಿಂದ ಹರಡುವ ‘ಕರೋನಾ ಜ್ವರ’ ಎಂಬ ಸಾಂಕ್ರಾಮಿಕ ರೋಗದ ನಿಯಂತ್ರಣದಲ್ಲಿ ಹಿಂಡು ಪ್ರತಿಬಂಧಕತೆ ಬಹು ಮುಖ್ಯ ಭೂಮಿಕೆ ವಹಿಸುತ್ತದೆ ಎಂದು ಅಂದಾಜಿಸಲಾಗಿದೆ. ಸಾಂಕ್ರಾಮಿಕವಲ್ಲದ ಲಸಿಕೆ ಇರುವ ರೋಗವಾದ ಟಿಟನಸ್ (ಧನುರ್ವಾಯು) ರೋಗಕ್ಕೆ ಈ ಹಿಂಡು ಪ್ರತಿರೋಧಕತೆ ಅನ್ವಯವಾಗದು, ಯಾಕೆಂದರೆ ಈ ರೋಗ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ನೇರವಾಗಿ ಹರಡುವುದಿಲ್ಲ. 1930 ರ ಸಮಯದಲ್ಲಿ ವಿಶ್ವದೆಲ್ಲೆಡೆ ಮೀಸಿಯಲ್ಸ್ (ದಡಾರ) ರೋಗ ನಿಯಂತ್ರಣದಲ್ಲಿ ಈ ಹಿಂಡು ಪ್ರತಿಬಂಧಕತೆ, ಬಹುಮುಖ್ಯ ಪಾತ್ರ ವಹಿಸಿತ್ತು. ಆನಂತರದ ದಿನಗಳಲ್ಲಿ ಲಸಿಕೆ ಮುಖಾಂತರ ರೋಗ ನಿರೋಧಕತೆ ಬೆಳೆಸಿಕೊಂಡು, ಸಮುದಾಯಕ್ಕೂ ಹಿಂಡು ಪ್ರತಿಬಂಧಕತೆ ಬರುವಂತೆ ಮಾಡಿ ಹಲವಾರು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಿದ ಉದಾಹರಣೆ ನಮ್ಮ ಮುಂದಿದೆ.

ಹಿಂಡು ಪ್ರತಿಬಂಧಕತೆಯಿಂದ ಯಾರಿಗೆ ಲಾಭ?
1) ಕೆಲವೊಂದು ವೈದ್ಯಕೀಯ ಕಾರಣಗಳಿಂದಾಗಿ ಕೆಲವರಿಗೆ ಲಸಿಕೆ ಹಾಕಲು ಸಾಧ್ಯವಾಗದೆ ಇರಬಹುದು. ಅಂತಹವರಿಗೆ ಹಿಂಡು ಪ್ರತಿಬಂಧಕತೆ ರಕ್ಷಣೆ ನೀಡುತ್ತದೆ.
2) ನವಜಾತ ಶಿಶುಗಳಿಗೆ ಲಸಿಕೆ ಹಾಕುವುದು ಶಿಶುವಿನ ರಕ್ಷಣೆಯ ದೃಷ್ಟಿಯಿಂದ ಕಷ್ಟವಾಗಬಹುದು. ನವಜಾತ ಶಿಶುಗಳಿಗೆ ತಾಯಿಯಿಂದ ಬಳುವಳಿಯಾಗಿ ಬರುವ ‘ಪರೋಕ್ಷವಾದ ಪ್ರತಿಬಂಧಕತೆ ಅಥವಾ ‘ಫಾಸಿವ್ ಇಮ್ಯುನಿಟಿ’, ಕೆಲವೊಮ್ಮೆ ಲಸಿಕೆಯ ಕಾರ್ಯಕ್ಷಮತೆಯನ್ನು ಕ್ಷೀಣಿಸಿ ಪ್ರತಿಬಂಧಕತೆ ಬರದಂತೆ ತಡೆಯುವ ಸಾಧ್ಯತೆ ಇರುತ್ತದೆ.
3) ರೋಗನಿರೋಧಕ ಶಕ್ತಿ ಕುಂದಿರುವ ಏಡ್ಸ್ ರೋಗಿಗಳು, ಹೆಚ್‍ಐವಿ ರೋಗಿಗಳು, ಲಿಂಪೋಮಾ ರೋಗಿಗಳು, ಲ್ಯುಕೇಮಿಯಾ ರೋಗಿಗಳು, ಎಲುಬಿನ ಅಸ್ಥಿಮಜ್ಜೆಯ ಕ್ಯಾನ್ಸರ್ ರೋಗಿಗಳು ಅಥವಾ ನಿಷ್ಕ್ರ್ರಿಯಗೊಂಡ ಗುಲ್ಮಗ್ರಂಥಿ ಹೊಂದಿರುವವರು, ರೇಡಿಯೋ ಥೆರಪಿ ಮತ್ತು ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವವರು ಮುಂತಾದವರಲ್ಲಿ ಲಸಿಕೆಯಿಂದ ಯಾವುದೇ ಲಾಭವಾಗದು. ಅವರಿಗೆ ರೋಗಪ್ರತಿಬಂಧಕತೆ ಬೆಳೆಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಇಂತಹವರಿಗೆ ಹಿಂಡು ಪ್ರತಿಬಂಧಕತೆ ರಕ್ಷಣೆ ನೀಡುತ್ತದೆ.

ಹಿಂಡು ಪ್ರತಿಬಂಧಕತೆಯಿಂದ ಏನೇನು ಲಾಭವಿದೆ?
1) ರೋಗಗಳಿಂದ ರಕ್ಷಣೆ : ಹಿಂಡು ಪ್ರತಿಬಂಧಕತೆಯಿಂದ ಸಹಜವಾಗಿಯೇ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಸಿಗುವ ಸಾಧ್ಯತೆ ಇದೆ ಎಂದು ಚರಿತ್ರೆಯಿಂದ ಹಲವು ಬಾರಿ ಸಾಬೀತಾಗಿದೆ. 1930ರ ದಶಕದಲ್ಲಿ ಮೀಸಿಯಲ್ಸ್ ಅಥವಾ ದಡಾರದ ಆರ್ಭಟ ಬಂದಾಗ ಹಲವಾರು ಮಕ್ಕಳು ರೋಗ ನಿರೋಧಕತೆಯನ್ನು ಬೆಳೆಸಿಕೊಂಡಿದ್ದನ್ನು ಖ್ಯಾತ ವಿಜ್ಞಾನಿ ಎ. ಡಬ್ಲ್ಯು. ಹೆನ್ರಿಚ್ ಗಮನಿಸಿದ್ದನು. ನಂತರ 1960ರ ಸಮಯದಲ್ಲಿ ಸಾಮೂಹಿಕ ಲಸಿಕೆ ಹಾಕಿಸಿ, ಹಿಂಡು ಪ್ರತಿಬಂಧಕತೆ ಹೆಚ್ಚಿಸಿ, ರೋಗವನ್ನು ಜಯಿಸಿದ್ದನ್ನು ಚರಿತ್ರೆಯಲ್ಲಿ ಕಂಡಿದ್ದೇವೆ. 1960 ಮತ್ತು 1970 ರಲ್ಲಿ ಸಿಡುಬು ರೋಗವನ್ನು ಇದೇ ರೀತಿ ಲಸಿಕೆ ಹಾಗೂ ಹಿಂಡು ಪ್ರತಿಬಂಧಕತೆ ಸಿದ್ಧಾಂತದ ಮೇಲೆ ಗೆದ್ದಿರುವುದು ಸಾರ್ವಕಾಲಿಕ ಸತ್ಯ.
2) ರೋಗದ ನಿರ್ಮೂಲನ: ಒಂದು ಭೌಗೋಳಿಕ ಪ್ರದೇಶದ ನಿರ್ದಿಷ್ಟ ಸಮುದಾಯದಲ್ಲಿ ಹಿಂಡು ಪ್ರÀತಿರೋಧಕತೆ ಬೆಳೆದು ಬಂದು ಸಾಕಷ್ಟು ಸಮಯ ಪರಿಣಾಮಕಾರಿಯಾಗಿ ಅಳವಡಿಸಿದ್ದಲ್ಲಿ ರೋಗ ಹರಡಲು ಸಾಧ್ಯವಾಗದೆ ರೋಗ ನಿರ್ಮೂಲನವಾಗುವ ಸಾಧ್ಯತೆ ಇದೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಸಿಡುಬು ರೋಗ ಮತ್ತು ಗೋಮಾರಿ ರೋಗ (ದೊಡ್ಡರೋಗ) ಅದೇ ರೀತಿ ಪೋಲಿಯೋ ರೋಗವನ್ನು ಸಂಪೂರ್ಣ ನಿರ್ನಾಮ ಮಾಡುವ ಎಲ್ಲ ಪ್ರಯತ್ನಗಳೂ ಯಶಸ್ಸಿನತ್ತ ಸಾಗಿದೆ ಎಂಬುದು ಸಮಾಧಾನಕಾರಿ ಅಂಶ.
3) ಲಸಿಕೆ ಇಲ್ಲದ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ದೊರಕುತ್ತದೆ, ಉದಾಹರಣೆ ಈಗಿನ ಕೊರೋನಾ ಜ್ವರ ಕೋವಿಡ್-19 ಎಂಬ ವೈರಾಣುವಿನ ವಿರುದ್ಧ ಹೋರಾಡಲು ಸೂಕ್ತ ಔಷಧಿ ಮತ್ತು ಲಸಿಕೆ ಇಲ್ಲದ ಕಾರಣ ‘ಹಿಂಡು ಪ್ರತಿಬಂಧಕತೆ’ ಹೆಚ್ಚು ಪರಿಣಾಮಕಾರಿಯಾದಲ್ಲಿ ಹಲವರಿಗೆ ರೋಗದಿಂದ ರಕ್ಷಣೆ ಸಿಗುವ ಸಾಧ್ಯತೆ ಹೆಚ್ಚಳವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಹಿಂಡು ಪ್ರತಿಬಂಧಕತೆ ತೊಂದರೆ ಏನು?
ಹಿಂಡು ಪ್ರತಿಬಂಧಕತೆಯಿಂದ ಹಲವಾರು ಲಾಭಗಳೂ ಅಥವಾ ಕೆಲವೊಂದು ತೊಂದರೆಗಳು ಕಂಡು ಬಂದಿದೆ. ಆರೋಗ್ಯವಂತ ಹಾಗೂ ರಕ್ಷಣಾ ವ್ಯವಸ್ಥೆ ಚೆನ್ನಾಗಿರುವ ವ್ಯಕ್ತಿಗಳು, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ವೈರಾಣು ಹರಡಲು, ಸಾಂಕ್ರಾಮಿಕ ರೋಗ ಪಸರಿಸಲು ಸಾಧ್ಯವಾಗುವುದಿಲ್ಲ. ಹೀಗಾದಾಗ ನಿರಂತರವಾಗಿ ವೈರಾಣುವಿನ ಮೇಲೆ ವಿಪರೀತ ರೂಪಾಂತರದ ಒತ್ತಡ ಉಂಟಾಗಿ ಅವುಗಳ ವರ್ಣತಂತುಗಳಲ್ಲಿ ಆರ್.ಎನ್.ಎ. ಒಳಗಿನ ಲಿಂಕ್‍ಗಳಲ್ಲಿ ವ್ಯತ್ಯಾಸವಾಗಿ ಹೊಸ ತಳಿಯ ವೈರಾಣುಗಳು ಸೃಷ್ಟಿಯಾಗುತ್ತದೆ. ಈ ರೀತಿ ಹೊಸ ತಳಿಯ ವೈರಾಣುಗಳು ಹಿಂಡು ಪ್ರತಿಬಂಧಕತೆಯನ್ನು ಎದುರಿಸಿ ಬದುಕುಳಿದು ರೋಗ ಹರಡುವ ಸಾಮಥ್ರ್ಯ ಪಡೆಯುತ್ತದೆ. ಇಂತಹಾ ಸಂದರ್ಭಗಳಲ್ಲಿ ರೋಗ ನಿಯಂತ್ರಣ ಕಷ್ಟವಾಗಬಹುದು. ಲಸಿಕೆ ಉತ್ಪಾದಿಸಿದರೂ ಈ ರೂಪಾಂತರಗೊಂಡ ವೈರಾಣುಗಳು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿ ರೋಗ ಹೆಚ್ಚಳವಾಗುವಂತೆ ಮಾಡುತ್ತದೆ. ಈಗ ನಮಗೆ ತಿಳಿದ ಮಾಹಿತಿಯಿಂದ ಹತ್ತಾರು ಬಗೆಯ ಕೋವಿಡ್ -19 ವೈರಾಣುವಿನ ರೂಪಾಂತರಗೊಂಡ ವೈರಾಣುಗಳು ಜಗತ್ತಿನೆಲ್ಲೆಡೆ ಪಸರಿಸುತ್ತಿದೆ. ಭಾರತದಲ್ಲಿ ಕಂಡು ಬಂದ ಈ ರೂಪಾಂತರಗೊಂಡ ಕೋವಿಡ್-19 ವೈರಾಣು ಅಷ್ಟು ಅಪಾಯಕಾರಿಯಲ್ಲ ಎಂಬುದು ಸಮಾಧಾನಕರ ಅಂಶವಾಗಿದೆ. ಇಟಲಿ, ಸ್ಪೇನ್, ಚೈನಾಗಳಲ್ಲಿ ಕಂಡು ಬಂದ ಕೋವಿಡ್-19 ವೈರಾಣು ಹೆಚ್ಚು ಅಪಾಯಕಾರಿ ಎಂದು ತಿಳಿದುಬಂದಿದೆ. ಅದೇನೇ ಇರಲಿ ಕಣ್ಣಿಗೆ ಕಾಣಿಸಿದ ಮೈಕ್ರಾನ್‍ಗಳಿಗಿಂತಲೂ ಚಿಕ್ಕದಾಗಿ ಈ ಕೋವಿಡ್-19 ವೈರಾಣು ಹಲವು ವೇಷಗಳಲ್ಲಿ ಕಾಣಿಸಿಕೊಂಡು ಮನುಕುಲವನ್ನೇ ನುಂಗಿ ನೀರು ಕುಡಿಯುತ್ತಾ ಜಗತ್ತಿನೆಲ್ಲೆಡೆ ತನ್ನ ಕದಂಬಬಾಹುಗಳನ್ನು ವಿಸ್ತರಿಸುತ್ತಿರುವುದು ಬಹಳ ಆತಂಕಕಾರಿ ವಿಚಾರವಾಗಿದೆ.

ಕೊನೆ ಮಾತು
ಕೋವಿಡ್ -19 ವೈರಾಣುವಿನಿಂದ ಹರಡುವ ಕೊರೋನಾ ಜ್ವರಕ್ಕೆ ಸೂಕ್ತ ಲಸಿಕೆ ಇಲ್ಲದ ಕಾರಣದಿಂದ ಕನಿಷ್ಟ ಪಕ್ಷ 60 ರಿಂದ 70 ಶೇಕಡಾ ಮಂದಿ ಈ ರೋಗದಿಂದ ಬಳಲಿ ಗುಣಮುಖರಾದಲ್ಲಿ ಉಳಿದ 30 ರಿಂದ 40 ಶೇಕಡಾ ಮಂದಿಗೆ ‘ಹಿಂಡು ಪ್ರತಿಬಂಧಕತೆ’ ಬರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಲಸಿಕೆ ಇದ್ದಲ್ಲಿ, ಲಸಿಕೆ ಹಾಕಿ ಹೆಚ್ಚಿನ ಜನರಿಗೆ ರೋಗ ಬರದಂತೆ ರೋಗ ಪ್ರತಿಬಂಧಕತೆ ಬೆಳೆಸಿದ್ದಲ್ಲಿ, ರೋಗಾಣು ಹರಡಲು ಸಾಧ್ಯವಾಗದಂತಾಗಿ ರೋಗ ತನ್ನಿಂತಾನೇ ನಿಯಂತ್ರಣಕ್ಕೆ ಬರುತ್ತದೆ. ಆದರೆ ಈ ಲಸಿಕೆ ತಯಾರಾಗಲು ಏನಿದ್ದರೂ ಒಂದು ವರ್ಷ ತಗಲುವ ಕಾರಣದಿಂದ ನಾವೀಗ ಹಿಂಡು ಪ್ರತಿಬಂಧಕತೆಯಿಂದಲೇ ಕೊರೋನಾ ವೈರಾಣುವಿನ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆಗೆ ಸಿಲುಕಿಸಿದ್ದೇವೆ. ನಮ್ಮ ದೇಶದ ಖ್ಯಾತ ರೋಗ ಶಾಸ್ತ್ರಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿವೃತ್ತ ಅಧಿಕಾರಿ ಡಾ| ಜಯಪ್ರಕಾಶ್ ಮುಲಿಯಿಲ್ ಅವರ ಅಪಾರ ಅನುಭವದ ನುಡಿ, ನಮ್ಮ ಜಗತ್ತಿನ ಇವತ್ತಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎಂದರೂ ತಪ್ಪಲ್ಲ. ಅವರ ಪ್ರಕಾರ “ ರೋಗ ಬರದಂತೆ ಚಂದ್ರಲೋಕಕ್ಕೆ ಹೋಗಿ ಕೂರುವುದು ಮೂರ್ಖತನದ ಪರಮಾವಧಿ. ಇನ್ನೇನಿದ್ದರೂ ರೋಗವನ್ನು ಎದುರಿಸಿ ಹಿಂಡು ಪ್ರತಿಬಂಧಕತೆ ಬರುವಂತೆ ಮಾಡಬೇಕಷ್ಟೆ. ರೋಗವನ್ನು ನಿರ್ಮೂಲನ ಮಾಡಲು ಸಾಧÀ್ಯವಿಲ್ಲದ ಹಂತಕ್ಕೆ ನಾವಿಂದು ತಲುಪಿದ್ದೇವೆ. ದೇಶದೆಲ್ಲೆಡೆ ಮತ್ತು ಜಗತ್ತಿನೆಲ್ಲೆಡೆ ಕಾಡ್ಗಿಚ್ಚಿನಂತೆ ಹೆಚ್ಚುತ್ತಿರುವ ಈ ಕೊರೋನಾ ಜ್ವರಕ್ಕೆ ಹೆದರಿ ಓಡಿ ಹೋದರೆ ಪಲಾಯನವಾದವಾದೀತು. ರೋಗಕ್ಕೆ ಹೆದರಿ ಮನೆ ಸೇರಿ ಎಷ್ಟು ದಿನ ಕೂರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇರಲಿ ಆದಷ್ಟು ಬೇಗ ವಿಜ್ಞಾನಿಗಳು ಈ ರೋಗಕ್ಕೆ ಲಸಿಕೆ ಕಂಡು ಹಿಡಿಯಲಿ ಮತ್ತು ಕೊರೋನಾ ರೋಗ ನಿಯಂತ್ರಣಕ್ಕೆ ಬರಲಿ ಎಂದು ತುಂಬ ಹೃದಯದಿಂದ ಹಾರೈಸೋಣ ಜಗತ್ತು ಕೊರೋನಾ ವೈರಾಣು ಮುಕ್ತವಾಗಿ ವಿಶ್ವದೆಲ್ಲೆಡೆ ಶಾಂತಿ ಮತ್ತು ಸೌಹಾರ್ದತೆ ಮಾಡಲಿ ಎಂದು ಆಶಿಸೋಣ. ಅದರಲ್ಲಿಯೋ ನಮ್ಮೆಲ್ಲರ ಹಿತ ಮತ್ತು ನೆಮ್ಮದಿ ಅಡಗಿದೆ.

ಡಾ| ಮುರಲೀ ಮೋಹನ್ ಚೂಂತಾರು

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here