


ಬಂಟ್ವಾಳ: ಕರೋನಾ ಎಂಬ ಮಹಾಮಾರಿ ದೇಶಕ್ಕೆ ವಕ್ಕರಿಸಿಕೊಂಡ ಹಿನ್ನೆಲೆ ಕೇಂದ್ರ ಸರ್ಕಾರ ದೇಶದಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿದೆ.
ಇದರಿಂದಾಗಿ ಇಡೀ ದೇಶ ಸ್ಥಬ್ಧವಾಗಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಕಂಗೆಟ್ಟಿದೆ.
ರಾಜ್ಯದಲ್ಲೂ ಲಾಕ್ ಡೌನ್ ಜಾರಿಯಲ್ಲಿದ್ದು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಲಾಕ್ ಡೌನ್ ನಿಂದಾಗಿ ಮದ್ಯದಂಗಡಿಗಳು ಬಂದ್ ಆಗಿದ್ದು, ಕುಡಿತದ ಚಟಕ್ಕೆ ಬಿದ್ದ ಹಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಹಿನ್ನೆಲೆ ಮದ್ಯಕ್ಕಾಗಿ ಚಡಪಡಿಸುತ್ತಿರುವವರಿಗೆ ಭರ್ಜರಿ ಸುದ್ದಿಯೊಂದು ಇದೆ.
ಏ. 14 ರ ಬಳಿಕವೂ ಲಾಕ್ಡೌನ್ ಮುಂದುವರೆದರೆ, ಪ್ರತಿನಿತ್ಯ ಮೂರು ಗಂಟೆಗಳ ಕಾಲ ಮದ್ಯದಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಲಾಕ್ ಡೌನ್ ನಿಂದಾಗಿ ರಾಜ್ಯದ ಪ್ರಮುಖ ಆದಾಯ ಮೂಲವಾಗಿರುವ ಮದ್ಯ ಮಾರಾಟಕ್ಕೆ ಹೊಡೆತ ಬಿದ್ದಿದ್ದು, ಈ ಹಿನ್ನಲೆ ಸರ್ಕಾರ ಈ ನಿರ್ಧಾರಕ್ಕೆ ಬರಲಿದೆ ಎನ್ನಲಾಗುತ್ತಿದೆ.
ಈಗಾಗಲೇ ಈ ಕುರಿತ ಪ್ರಸ್ತಾವನೆಯನ್ನು ಅಬಕಾರಿ ಇಲಾಖೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲಿಕೆಯಾಗಿದ್ದು, ಇದಕ್ಕೆ ಅನುಮತಿ ದೊರೆತರೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮದ್ಯದಂಗಡಿಗಳು ತೆರೆದಿರಲಿವೆ. ಏಪ್ರಿಲ್ ಹದಿನಾಲ್ಕರ ನಂತರವೂ ಲಾಕ್ ಡೌನ್ ಮುಂದುವರೆದರೆ ಮಾತ್ರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.





