ಬಂಟ್ವಾಳ: ಕೊರೋನಾ ವೈರಸ್ ಇಡೀ ಭಾರತವನ್ನೇ ಲಾಕ್ ಡೌನ್ ಮಾಡಿಬಿಟ್ಟಿದೆ. ಹಲವು ತಲೆಮಾರುಗಳಿಂದ ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬಂದಿರುವ ಸರ್ವಧರ್ಮಗಳ ಆಚರಣೆಗಳನ್ನೂ, ಸಂಭ್ರಮಗಳನ್ನೂ ಕೊರೋನಾ ತಲೆಕೆಳಗಾಗಿಸಿದೆ. ಇದಕ್ಕೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಜಾತ್ರೆಯೂ ಹೊರತಾಗಿಲ್ಲ.
ಶ್ರೀ ಕ್ಷೇತ್ರದ ಜಾತ್ರೆಗಾಗಿ ಬೆಳೆಯುವ ಕಲ್ಲಂಗಡಿ ಹಣ್ಣಿನ ವಿಶೇಷತೆಗಳೇನು..? ಈ ಬಾರಿ ಒದಗಿ ಬಂದ ಸಂಕಷ್ಟವೇನು ಎಂಬುದರ ಸವಿವರ ಇಲ್ಲಿದೆ…

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಪೊಳಲಿಜಾತ್ರೆಗೆ ಬರುವವರು `ಪುರಾಲ್ದ ಪ್ರಸಾದ’ ಎಂದೇ ಕರೆಯಲ್ಪಡುವ ಬಚ್ಚಂಗಾಯಿ(ಕಲ್ಲಂಗಡಿ) ಹಣ್ಣನ್ನು ಖರೀದಿಸದೆ ಹೋಗುವುದಿಲ್ಲ. ಜಾತ್ರೆಯಂದು ಈ ಹಣ್ಣಿಗೆ ಭಾರೀ ಬೇಡಿಕೆ. ಕಡು ಹಸಿರು ಬಣ್ಣದ ಈ ಕಲ್ಲಂಗಡಿ ಹಣ್ಣಿನೊಳಗಿನ ಕಡು ಕೆಂಪು ತಿರುಳು ಬೇರೆಲ್ಲೂ ಸಿಗುವುದಿಲ್ಲ ಎಂಬ ಪ್ರತೀತಿ ಇದೆ. ಈ ಹಣ್ಣನ್ನು ಪೊಳಲಿ ಹಾಗೂ ಮಳಲಿಯಲ್ಲಿಯೇ ಬೆಳೆಸುತ್ತಾರೆ ಎಂಬುವುದು ಇಲ್ಲಿನ ವಿಶೇಷ. ಕೆಲವು ರೈತರು ತಮ್ಮ ಊರಿನ ಗದ್ದೆಯಲ್ಲಿ ಬೆಳೆದ ಈ ಹಣ್ಣನ್ನು ದೇವಸ್ಥಾನದ ಜಾತ್ರೆಯ ಸಂದರ್ಭ ಮಾರುತ್ತಾರೆ.

ಪುರಾಣದ ಹಿನ್ನೆಲೆ:
ಪುರಾಣದಲ್ಲಿ ಬರುವ ರಕ್ತಬೀಜಾಸುರನ ತಲೆ ಎಂದು ಬಿಂಬಿತವಾದ ಕಲ್ಲಂಗಡಿ ಹಣ್ಣಿನ ಹಿಂದೆ ಒಂದು ಸ್ವಾರಸ್ಯಕರವಾದ ಕಥೆಯಿದೆ. ದೇವಿ ರಕ್ತಬೀಜಾಸುರನನ್ನು ಸಂಹಾರ ಮಾಡಿದಾಗ ದೇವಿಯಲ್ಲಿ ತಾನು ಅಮರವಾಗಿರುವಂತೆ ವರ ಬೇಡುತ್ತಾನೆ. ಅದಕ್ಕೆ ದೇವಿ ಪೊಳಲಿ ಜಾತ್ರೆಯ ಸಂದರ್ಭ ನಿನ್ನ ತಲೆ ಕಲ್ಲಂಗಡಿ ರೂಪವನ್ನು ತಾಳಲಿ, ಅದನ್ನು ಭಕ್ತರು ಪ್ರಸಾದವಾಗಿ ಸ್ವೀಕರಿಸಲಿ ಎನ್ನುತ್ತಾರೆ. ಅದರಂತೆ ಇಲ್ಲಿ ಬೆಳೆಯುವ ಕಲ್ಲಂಗಡಿ ತಿರುಳು ರಕ್ತಬೀಜಾಸುರನ ರಕ್ತದ ಬಣ್ಣದಂತೆ ಕಡುಕೆಂಪಾಗಿದ್ದು, ಅದನ್ನು ಪ್ರಸಾದದಂತೆ ಸ್ವೀಕರಿಸಿಕೊಂಡು ಹೋಗುತ್ತಾರೆ ಎನ್ನುವುದು ಹಿರಿಯರ ಮಾತು.

ಪೂರ್ಣ ಸಾವಯವ..!
ಇಲ್ಲಿ ಬೆಳೆಯುವ ಹಣ್ಣು ರಾಸಾಯನಿಕ ಮುಕ್ತವಾಗಿದ್ದು, ಸಾವಯವ ಗೊಬ್ಬರ ಹಾಗೂ ನೀರಿನಿಂದಷ್ಟೇ ಬೆಳೆಸಲಾಗುತ್ತದೆ.  ವಿಶೇಷವೆಂದರೆ ಪರವೂರಿನ ಕಲ್ಲಂಗಡಿ ವ್ಯಾಪಾರಿಗಳಿಗೆ ಅವಕಾಶವಿಲ್ಲ. ಬೇಡಿಕೆಯೂ ಸ್ಥಳೀಯ ಕಲ್ಲಂಗಡಿ ಹಣ್ಣಿಗೆ. ಈ ಬೆಳೆಯನ್ನು ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಸುತ್ತಾರೆ. ಗಂಜಿಮಠ ಸಮೀಪದ ಮಳಲಿ(ಮಣೇಲ್) ಮಳಲಿ ಗ್ರಾಮದಲ್ಲಿ ಸುಮಾರು 10 ಎಕರೆಕ್ಕಿಂತಲೂ ಜಾಸ್ತಿ ಭೂಮಿಯಲ್ಲಿ ಈ ಫಸಲನ್ನು ಬೆಳೆಸುವುದು ವಿಶೇಷ.

ಬೆಳೆ ಮಾಡುವುದಕ್ಕೂ ಧಾರ್ಮಿಕ ವಿಧಾನ:
ಅಕ್ಟೋಬರ್ ನಲ್ಲಿ ಗದ್ದೆಯಲ್ಲಿ ಭತ್ತವನ್ನು ಕಟಾವು ಮಾಡಿದ ನಂತರ ಗದ್ದೆಯಲ್ಲಿ ನೀರಿನ ತೇವಾಂಶದಿಂದ ಮೃದುವಾಗಿರುತ್ತದೆ. ಆ ಸಮಯದಲ್ಲಿ ಬೆಳೆ ಬೆಳೆಸಲು ಗದ್ದೆಯಲ್ಲಿ ಮಣ್ಣನ್ನು ತೆಗೆದು ಓಳ್ಯ(ಹುಣಿಕಟ್ಟು) ಮಾಡುತ್ತಾರೆ. ನಂತರ ಜನವರಿ ತಿಂಗಳಿನ ಮಕರ ಸಂಕ್ರಮಣ ಆಗಿ 10 ದಿನಗಳ ನಂತರ ಬೆಳೆಯಲ್ಲಿ ಹಾನಿ ಬಾರದಂತೆ ಬೀಜ ಹಾಕುವ ಮೊದಲು ದೇವರಲ್ಲಿ ಪ್ರಾರ್ಥಿಸುತ್ತಾರೆ. ನಂತರ ಕೃಷಿ ಮಾರುಕಟ್ಟೆಯಲ್ಲಿ ಸಿಗುವ ಹೈಬ್ರಿಡ್ ತಳಿಯ ಬಿತ್ತನೆ ಬೀಜ ಹಾಕುತ್ತಾರೆ. ಒಳ್ಯದಲ್ಲಿ ಒಂದು ಅಡಿಗೆ ಒಂದು ಬೀಜದಂದೆ ಹಾಕುತ್ತಾರೆ. ಇದಕ್ಕೆ ಸುಡುಮಣ್ಣು, ಹಟ್ಟಿಗೊಬ್ಬರ ಹಾಕಿ ನಾಲ್ಕು ದಿನಗಳಿಗೊಮ್ಮೆ ನೀರು ಹಾಕುತ್ತಾರೆ.

ಸುಮಾರು 40 ವರ್ಷಗಳ ಹಿಂದೆ ಈ ಬೇಳೆಗೆ ಕೇವಲ ಸುಡುಮಣ್ಣು ಮತ್ತು ಹಟ್ಟಿಗೊಬ್ಬರ ಮಾತ್ರ ಹಾಕುತ್ತಿದ್ದರು. ಇದರ ನಡುವೆ ಉಪಬೆಳೆಯಾಗಿ ಸೌತೆಕಾಯಿ ಬೆಳೆ ಮಾಡುತ್ತಾರೆ. ಬೀಜ ಬಿತ್ತನೆಯ ನಂತರ ಹಣ್ಣು ಕಟಾವು ಮಾಡುವ ತನಕ ಆ ಗದ್ದೆಗೆ ಯಾರೂ ಚಪ್ಪಲಿ ಹಾಕಿಕೊಂಡು ಹೋಗಲಿಕ್ಕೆ  ಅವಕಾಶ ಇಲ್ಲ. ಅಷ್ಟೊಂದು ಪಾವಿತ್ರ್ಯತೆಯನ್ನು ಕಾಯುತ್ತಾರೆ. ಬಿತ್ತನೆಬೀಜ ಹಾಕುವಾಗ ಇಲಿ ಮತ್ತು ಇರುವೆಗಳ ಉಪಟಳ, ಗಿಡ ಆದ ಕೂಡಲೇ ನವಿಲುಗಳ  ಉಪಟಳ ಇರುತ್ತದೆ. ಸುಮಾರು ವರುಷಗಳ ಹಿಂದೆ ಜಾತ್ರೆಯಲ್ಲಿ ಜನರು ಕಲ್ಲಂಗಡಿ ತಿನ್ನುವಾಗ ಬಿದ್ದ ಬೀಜವನ್ನು ಜಾತ್ರೆ ಮುಗಿದ ಮೇಲೆ ಗುಡಿಸಿ ಸಾರಿಸಿ ಮಣ್ಣು ಮಿಶ್ರಿತ ಬೀಜವನ್ನು ಕೊಂಡು ಹೋಗಿ ಮರುವರ್ಷ ಅದನ್ನೇ ಬೀತ್ತನೆ ಬೀಜ ಹಾಕುತ್ತಿದ್ದರು.  ಜಾತ್ರೆಯ ಕಟಾವು ಮಾಡುವಾಗ ಬೆಳೆಯಲ್ಲಿ ಬೆಳೆದ ಒಂದು ಕಲ್ಲಂಗಡಿ ಹಣ್ಣನ್ನು ದೇವಸ್ಥಾನದಲ್ಲಿ ದೇವರಿಗೆ ಸರ್ಮಪಿಸಿ ಪ್ರಾರ್ಥಿಸಿ ನಂತರ ಉಳಿದ ಹಣ್ಣನ್ನು ಕಟಾವು ಮಾಡಿ ವಾಹನದಲ್ಲಿ ಪೊಳಲಿಗೆ ಕೊಂಡುಹೋಗುತ್ತಾರೆ. ಕಲ್ಲಂಗಡಿ ಹಣ್ಣನ್ನು ಕೊಯ್ದು ಸಾಗಾಟ ಮಾಡುವವರೆಗೆ ಅದನ್ನು ಮಣ್ಣಿನ ಪಾತ್ರೆಯಷ್ಟೆ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಅದು ಕೆಳಗೆ ಬಿದ್ದು ಒಡೆದುಹೋಗುತ್ತದೆ.

ಭಾರೀ ಬೆಲೆ..
ಸಾಮಾನ್ಯ ಗಾತ್ರದ ಕಲ್ಲಂಗಡಿ ಹಣ್ಣಿಗೆ ಸುಮಾರು ರೂ.50ರಿಂದ ರೂ. 150 ರೂ ವರೆಗೆ ಇರುತ್ತದೆ. ಮತ್ತು ದೊಡ್ಡ ಗಾತ್ರದ ಕಲ್ಲಂಗಡಿ ಹಣ್ಣಿಗೆ ರೂ. 200-350 ರೂ ಇರುತ್ತದೆ. ಒಮ್ಮೆಮ್ಮೆ ರಥೋತ್ಸವದ ದಿನದಂದು ಎಲ್ಲಾ ಹಣ್ಣುಗಳು ಮಾರಿ ಹೋಗುತ್ತದೆ. ಮಾರಾಟಗಾರರಿಗೆ ಮನೆಗೆಕೊಂಡು ಹೋಗಲ್ಲಿಕ್ಕೆ ಹಣ್ಣುಗಳೇ ಸಿಗುವುದಿಲ್ಲ. ಪೊಳಲಿಯಲ್ಲಿ ಮಾರುವ ಸಂದರ್ಭ, ಅಂಗಡಿ ಹಾಕಿ ಮಾರುತ್ತಾರೆ. ಜಾತ್ರೆಯಲ್ಲಿ ಕಲ್ಲಂಗಡಿ ಹಣ್ಣು ವ್ಯಾಪಾರ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಜಾಗ ಗುರುತು ಮಾಡಿ ಕೊಡುತ್ತಾರೆ. ಕಲ್ಲಂಗಡಿ ಹಣ್ಣು ವ್ಯಾಪಾರಿಗಳಿಗೆ ಮಾತ್ರ ವರ್ಷವು ಅದೇ ಸ್ಥಳ ಸಿಗುತ್ತದೆ. ಅವರಿಗೆ ರಿಯಾಯಿತಿ ಇದೆ,  ಟೆಂಡರ್ ಇಲ್ಲ. ಹಿಂದೆ ದ.ಕ ಜಿಲ್ಲೆಯವರು ಪೊಳಲಿಯ ಕಲ್ಲಂಗಡಿ ಹಣ್ಣನ್ನು ತಿನ್ನಲೆಂದೇ  ಜಾತ್ರೆಗೆ ಬರುತ್ತಿದ್ದರು. ಈಗಲೂ ಜಾತಿ ಮತ ಭೇದವಿಲ್ಲದೆ ಎಲ್ಲರೂ ಶ್ರೀದೇವಿಯ ಜಾತ್ರೆಯ ವೈಭವ ನೋಡಿ ಪೊಳಲಿಯ ಕಲ್ಲಂಗಡಿ ಹಣ್ಣನ್ನು (ಪುರಲ್ದ ಬಚ್ಚಂಗಾಯಿ) ಮನೆಗೆ ಕೊಂಡುಹೋಗುತ್ತಾರೆ. ಧಾರ್ಮಿಕ ನಂಬಿಕೆಯೊಂದು ಈ ಬಗೆಯ ಕೃಷಿಕ್ರಾಂತಿಗೆ
ಕಾರಣವಾಗುತ್ತಿದ್ದುದು ವಿಶೇಷವೇ ಸರಿ.

ಆದರೆ ಈ ಬಾರಿ…

ಆದ್ರೆ ಈ ಬಾರಿ ಕೊರೋನಾ ವೈರಸ್ ನ ಭೀತಿಯ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ರದ್ದುಗೊಂಡಿದೆ. ಹೀಗಾಗಿ ಪೊಳಲಿ ಪರಿಸರದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜಾತ್ರಾ ಮಹೋತ್ಸವದಂದು ಮಾರಾಟ ಮಾಡಲು ಬೆಳೆದಂತಹ ಕಲ್ಲಂಗಡಿ ಹಣ್ಣುಗಳು ವ್ಯಾಪಾರವಾಗದೇ ಹಣ್ಣುಗಳು ಕೊಳೆಯುವ ಭೀತಿ. ಹೀಗಾಗಿ ಮೂರು ತಿಂಗಳ ಕಾಲ ಕಷ್ಟಪಟ್ಟು ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಖರೀದಿಸಲು ಜನರಿಲ್ಲದಂತಾಗಿದೆ.

ಹೀಗಾಗಿ ಈ ಸಲ ಕೆಲವರು ಅನಿವಾರ್ಯವಾಗಿ ಮನೆಯಲ್ಲೇ ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವರು ಊರೂರು ತಿರುಗಿ ಕಲ್ಲಂಗಡಿ ಹಣ್ಣನ್ನು ಮಾರಲೇ ಬೇಕಾದ ಸ್ಥಿತಿ ಎದುರಾಗಿದೆ‌.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here