


ವಿಟ್ಲ: ಕರೊನಾ ವೈರಸ್ ತೀವ್ರತೆಯನ್ನು ಗಮನಿಸಿ ಜನರನ್ನು ಪೇಟೆಗೆ ಹೋಗದಂತೆ ಮಾಡಿ, ಜತೆಗೆ ಯಾವ ಸಂದರ್ಭದಲ್ಲಿಯೂ ಒಂದೇ ಕಡೆ ಗುಂಪು ಸೇರದಂತೆ ಮಾಡಿ ಜನರ ಬಳಿಗೆ ಅಳಿಕೆ ಗ್ರಾಮ ಪಂಚಾಯಿತಿ ವತಿಯಿಂದ ಅಳಿಕೆ ಶ್ರೀಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಸಹಯೋಗದಲ್ಲಿ ದಿನಸಿ ಹಾಗೂ ಅಗತ್ಯವಸ್ತುಗಳನ್ನು ಪೂರೈಕೆ ಮಾಡುವ ಸೇವಾ ಕಾರ್ಯಕ್ಕೆ ಬಹು: ರಾಜ್ಯದಲ್ಲಿ ಮೊದಲ ಬಾರಿಗೆ ಮುಂದಾಗಿದೆ.
ಅಳಿಕೆ ಗ್ರಾಮ ಪಂಚಾಯಿತಿ ಗ್ರಾಮೀಣ ಕಾರ್ಯ ಪಡೆ ಸಭೆಯ ನಿರ್ಣಯದಂತೆ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಗ್ರಾಮದ ಪ್ರತೀ ಮನೆಗಳಿಗೆ ಜೀವನಾವಶ್ಯಕ ಅಗತ್ಯ ವಸ್ತುಗಳಾದ ದಿನಸಿ ಸಾಮಾನು ಮತ್ತು ತರಕಾರಿಗಳನ್ನು ವಾರಕ್ಕೆ ಎರಡು ಬಾರಿ ಸೋಮವಾರ ಹಾಗೂ ಗುರುವಾರ ವಿತರಣೆ ಮಾಡುವ ಕಾರ್ಯಕ್ಕೆ ಮುಂದಾಗುವ ಮೂಲಕ ಅಳಿಕೆ ಎಲ್ಲರಿಗೂ ಮಾದರಿಯಾಗಿದೆ.
ಗ್ರಾಮವನ್ನು 8 ವಿಭಾಗವಾಗಿ ವಿಂಗಡಿಸಿ, ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಭಜನಾ ಮಂದಿರ, ಸೇವಾ ಸಮಿತಿ, ಮದರಸ ಕಟ್ಟಡ, ಆಸ್ಪತ್ರೆಯ ಕಟ್ಟಡ, ಶಾಲೆಗಳನ್ನು ಬಳಸಿಕೊಂಡು ಈ ಕಾರ್ಯವನ್ನು ಯಶಸ್ವಿ ಮಾಡಲು ಮುಂದಾಗಿದೆ. ಗ್ರಾಮ ಸ್ಥರು ಪೇಟೆಗೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕಾರ್ಯ ಬಹಳಷ್ಟು ಸಹಕಾರಿಯಾಗಲಿದೆ.





