– ಮೌನೇಶ ವಿಶ್ವಕರ್ಮ

ದೂರದ ಚೀನಾದಲ್ಲಿ ಕೊರೋನಾ ವೈರಸ್ ಜೀವಗಳನ್ನು ಬಲಿತೆಗೆದುಕೊಂಡಾಗ ಅದರ ತೀವ್ರತೆಯ ಅರಿವಾಗಲಿಲ್ಲ, ನಂತರ ಒಂದೊಂದೇ ದೇಶಗಳನ್ನು ಆವರಿಸಿದ ಕೊರೋನಾ ನಮ್ಮ ಭಾರತದಲ್ಲಿಯೂ ಧೃಡಪಟ್ಟಾಗಲೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ, ಕಲ್ಬುರ್ಗಿ ಯಲ್ಲಿ ವೃದ್ಧರೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಾಗಿನಿಂದ ಇಡೀ ಭಾರತವೇ ಜನತಾ ಕರ್ಫ್ಯೂಗೆ ಒಳಗಾಗಲಿ ಎಂದಾಗಲೂ ಕೊರೊನಾ ಕೆಲವರಿಗೆ ತಮಾಷೆಯ ಸಂಗತಿ ಎಂದೆನ್ನಿಸಿತ್ತು. ನಂತರ ಇಡೀ ದೇಶ 21 ದಿನ ಲಾಕ್ ಡೌನ್ ಆಗಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಮುಗಿದು ಮನವಿ ಮಾಡಿದಾಗಲೂ ಕೊರೋನಾ ಇಷ್ಟು ಸೀರಿಯಸ್ ಆಗುತ್ತದೆ ಅನ್ನೋದನ್ನೂ ಮರೆತು ಊರು ಸುತ್ತೋಕೆ ಹೊರಟವರು ನಾವು.. ಆದರೆ ಇದೀಗ ಕೊರೋನಾ ನಮ್ಮ ಮನೆಯೊಳಗೆ ಬಂದಿದೆ. ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಆತ್ಮಾಹುತಿಯಾದೀತು ಅಷ್ಟೇ..

ಮೊನ್ನೆ ಮೊನ್ನೆ ವರೆಗೂ ಕಂಚಿನಡ್ಕಪದವಿನ ತ್ಯಾಜ್ಯ ವಿಲೇವಾರಿ ಘಟಕದ ಕಾರಣಕ್ಕೆ ಸುದ್ದಿಯಲ್ಲಿದ್ದ ಸಜಿಪನಡು ಗ್ರಾಮ ಇದೀಗ ಮತ್ತೊಮ್ಮೆ ಸದ್ದು ಮಾಡಿದೆ. ಇಡೀ ಭಾರತದಲ್ಲೇ ಅಪರೂಪದ ಪ್ರಕರಣ ಎಂಬಂತೆ, ದಕ್ಷಿಣ ಕನ್ನಡದ ಮೊದಲ ಕೊರೋನಾ ಸೋಂಕು ಪ್ರಕರಣ ಸಜಿಪನಡು ಗ್ರಾಮದ ಹತ್ತು ತಿಂಗಳ ಹಸುಳೆಯಲ್ಲಿ ಧೃಡಪಟ್ಟಿದೆ.
ಈವರೆಗೆ ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ಮಾತ್ರ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿತ್ತು, ಆದರೆ ಪ್ರಸ್ತುತ ಸಜೀಪದ ಗ್ರಾಮೀಣ ಪ್ರದೇಶದ 10 ತಿಂಗಳ ಕಂದಮ್ಮನಿಗೆ ಕೊರೊನೊ ಪತ್ತೆ ಎಂಬ ಸುದ್ದಿ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಮುಂದೆ ಏನೇನು ಕಾದಿದೆಯೋ ಎಂಬ ಆತಂಕ ಎಲ್ಲೆಡೆ ಮನೆಮಾಡಿದೆ.

*ಲಾಕ್ ಡೌನ್ ಉಲ್ಲಂಘಿಸುವವರಿಗೆ ಎಚ್ಚರಿಕೆ..*

ಕೊರೋನಾ ಸೋಂಕು ಸಾಮುದಾಯಿಕವಾಗಿ ಹರಡುವುದಿಲ್ಲ, ನಿರ್ದಿಷ್ಟ ಹಿನ್ನೆಲೆಯ ವ್ಯಕ್ತಿಯಿಂದ ಪಸರಿಸಬಹುದು ಎಂಬ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆದಿದ್ದು, ಇದೀಗ ಕರ್ನಾಟಕದಲ್ಲಿ ಕೊರೋನಾ ಸೋಂಕು ಮೂರನೆಯ ಹಂತಕ್ಕೆ ತಲುಪಿದೆ. ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿ, ಕೊರೋನಾ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದವರಿಗೆ ಇದೊಂದು ಎಚ್ಚರಿಕೆಯಾಗಿದ್ದು, ಸಾಮಾಜಿಕ ಅಂತರ ಕಾಯುವುದರ ಜೊತೆಗೆ ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ
ಮನೆಯೊಳಗೇ ಸುರಕ್ಷಿತ ವಾಗಿರುವುದು ಒಳ್ಳೆಯದು..

*ಮನೆಯೊಳಗೇ ಬಂಧಿಯಾಗುವ ದಿನ ಬಂದೀತು..!*

ಜಾಗತಿಕ ಮಟ್ಟದಲ್ಲಿ ಕೊರೋನಾ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ಭಾರತ ಹಾಗೂ ಇತರ ದೇಶದೊಂದಿಗಿನ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ನಮ್ಮ ಅದೆಷ್ಟೋ ಅಣ್ಣತಮ್ಮಂದಿರು ಅಕ್ಕ ತಂಗಿಯರು ತಾಯ್ನೆಲ ಭಾರತದ ಸಂಪರ್ಕ ಕಡಿದುಕೊಂಡಿದ್ದಾರೆ. ಬಳಿಕದ ಬೆಳವಣಿಗೆಯಲ್ಲಿ ರಾಜ್ಯಗಳ ನಡುವೆ, ಜಿಲ್ಲೆಗಳ ನಡುವೆ ಸಂಪರ್ಕ ಕಡಿದುಹೋಗಿವೆ. ಇದೀಗ ದಕ್ಷಿಣಕನ್ನಡ ಜಿಲ್ಲೆಯ ಸಜಿಪನಡು ಗ್ರಾಮದ ಹಸುಳೆಗೆ ಕೊರೋನಾ ಸೋಂಕು ಧೃಡಪಟ್ಟಿರುವ ಹಿನ್ನೆಲೆಯಲ್ಲಿ ಪ್ರದೇಶದ ಸುತ್ತಮುತ್ತಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇವರ ಮನೆಗೂ ಯಾರು ಹೋಗದಂತೆ ಈಗಾಗಲೇ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ನೇತೃತ್ವದಲ್ಲಿ ನಾಕಾಬಂಧಿ ಮಾಡಲಾಗಿದೆ. ಅಲ್ಲದೆ ಸಜಿಪನಡು ಗ್ರಾಮಕ್ಕೆ ಯಾರೂ ಬರುವಂತಿಲ್ಲ ಹಾಗೂ ಹೊರಗೆ ಹೋಗದಂತೆ ಪೋಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ.
ಕೊರೋನಾ ವೈರಾಣುವಿನ ಅಬ್ಬರ ಹೀಗೇ ಮುಂದುವರಿದರೆ ಗ್ರಾಮಗಳ ಹಂತಕ್ಕೆ ಬಂದಿರುವ ಈ ದಿಗ್ಭಂಧನ ಮನೆಮನೆಗಳಿಗೆ ಆವರಿಸಿ ನಾವೆಲ್ಲರೂ ನಮ್ಮ ನಮ್ಮ ಮನೆಯೊಳಗೇ ಬಂಧಿಯಾಗುವ ದಿನ ಬಂದೀತು..

*ಯಾರನ್ನೂ ಬಿಟ್ಟಿಲ್ಲ..*

ಜಗತ್ತಿನಲ್ಲಿ ಈವರೆಗೆ ನಡೆದ ಕೊರೋನಾ ಸಾವಿನ ಸರಮಾಲೆಯನ್ನು ಗಮನಿಸಿದರೆ, ವೃದ್ಧರು ಮಕ್ಕಳ ಜೊತೆಗೆ ಎಲ್ಲಾ ವಯೋಮಾನದವರೂ ಇದಕ್ಕೆ ಬಲಿಯಾಗಿದ್ದಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು ರಕ್ಷಣೆ ನೀಡಿದ ಪೊಲೀಸರು,ರಕ್ಷಣಾ ಸಿಬ್ಬಂದಿಗಳು ಸುದ್ದಿಮಾಡಿದ ಮಾಧ್ಯಮದವರನ್ನೂ ಆಕ್ರಮಿಸಿಕೊಂಡಿದೆ.
ಒಟ್ಟಿನಲ್ಲಿ ಕೋರೋನಾ ವೈರಾಣು ಯಾರನ್ನು, ಯಾವಾಗ,ಹೇಗೆ ಆವರಿಸಿಕೊಳ್ಳಬಹುದು ಎಂದು ಊಹಿಸಲೂ‌ ಅಸಾಧ್ಯ.
ಇಂತಹ ಸಂಕಟದ ಸನ್ನಿವೇಶದಲ್ಲಿಯೂ ಕೊರೋನಾ ವಿರುದ್ಧ ಹೋರಾಡುವ ಮನಸ್ಸುಗಳನ್ನು ಬೆಂಬಲಿಸುವ ಮನಸ್ಸು ನಮ್ಮೆಲ್ಲರದ್ದಾಗಬೇಕು. ತಮ್ಮ ಜೀವದ ಹಂಗು ತೊರೆದು ಕೊರೋನಾ ವಿರುದ್ಧದ ಹೋರಾಟದ ಯೋಧರೆನ್ನಿಸಿಕೊಂಡಿರುವ ವೈದ್ಯರು, ದಾದಿಯರು, ಆಡಳಿತ ವ್ಯವಸ್ಥೆಯ ಅಧಿಕಾರಿಗಳು, ರಕ್ಷಣೆ ನೀಡುವ ಪೊಲೀಸರು, ರಕ್ಷಕರು, ಸ್ವಯಂ ಸೇವಕರು ಹಾಗೂ ಮಾಧ್ಯಮದವರ ಕಾರ್ಯಕ್ಷಮತೆಗೆ ಜೈ ಎನ್ನುತ್ತಾ, ಅವರ ಆರೋಗ್ಯಕ್ಕಾಗಿಯೂ ದೇವರಲ್ಲಿ ಪ್ರಾರ್ಥಿಸೋಣ.

ನಮ್ಮ ಜಾಗೃತಿಗೆ ಮತ್ತೊಬ್ಬರನ್ನು ಕಾಯಬೇಕಾಗಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವ ದೃಢಸಂಕಲ್ಪ ನಮ್ಮದಾಗಬೇಕು. ಸರ್ಕಾರಗಳು ಹೇಳುವ ಎಲ್ಲಾ ನಿಬಂಧನೆಗಳನ್ನು ಪಾಲಿಸುವುದರೊಂದಿಗೆ, ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಆರೋಗ್ಯದ ಜೊತೆ ಎಲ್ಲರ ಆರೋಗ್ಯವನ್ನು ಕಾಪಾಡುವ ಮನಸ್ಥಿತಿ ನಮ್ಮೆಲ್ಲರದ್ದಾಗಲಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here