ಬಂಟ್ವಾಳ : ಕೊರೋನ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಕರೆ ನೀಡಲಾಗಿದ್ದರೂ, ನಿಯಮವನ್ನು ಉಲ್ಲಂಘಿಸಿ ಮನೆಯಿಂದ ಹೊರ ಬರುವವರ ಸಂಖ್ಯೆ ಹೆಚ್ಚಾದಂತೆ ಕಾಣುತ್ತಿದೆ. 21 ದಿನಗಳ ಲಾಕ್ ಡೌನ್ ನ ಎರಡನೇ ದಿನವಾದ ಗುರುವಾರ ಮನೆಯಿಂದ ಹೊರ ಬಂದವರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದರು. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೀಡಬಾರದು ಎಂಬ ಆದೇಶವನ್ನು ಪೊಲೀಸರಿಗೆ ನೀಡಲಾಗಿತ್ತು.

ಇದರ ಬೆನ್ನಲ್ಲೇ ಅಗತ್ಯ ವಸ್ತುಗಳ ನೆಪದಲ್ಲಿ ಸಾರ್ವಜನಿಕರು ಅಂಗಡಿ-ಮುಗ್ಗಟ್ಟುಗಳ ಮುಂದೆ ಇರುವುದು ಕಂಡುಬಂದಿದೆ. ಅಲ್ಲದೆ ರಿಕ್ಷಾಗಳೂ ಬಾಡಿಗೆ ನಡೆಸುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಸೂಚನೆಯನ್ನು ಹಲವೆಡೆಗಳಲ್ಲಿ ಗಾಳಿಗೆ ತೂರಿದಂತಾಗಿದೆ.
ಈ ಕುರಿತಾಗಿ ಜನಸಾಮಾನ್ಯರಲ್ಲಿ ಇನ್ನೂ ಸ್ವಯಂ ಶಿಸ್ತು ಬಂದಂತಿಲ್ಲ. ತಮ್ಮ ಆರೋಗ್ಯ ಕೆಡಿಸಿಕೊಳ್ಳುವ ಜೊತೆಯಲ್ಲಿ ಇತರರ ಆರೋಗ್ಯವನ್ನು ಕೆಡಿಸುವ ಇಂತಹವರಿಗೆ ಸಾಮೂಹಿಕ‌ ಧಿಕ್ಕಾರ ಹೇಳಬೇಕಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡರೆ ಮಾತ್ರ ಕೊರೋನ ವಿರುದ್ಧ ಜಯಗಳಿಸಬಹುದು ಎಂದು ಪ್ರಧಾನಮಂತ್ರಿ ಮನವಿ ಮಾಡಿಕೊಂಡಿದ್ದರೂ, ಜಿಲ್ಲಾಡಳಿತ ಸೂಚನೆ ನೀಡಿದ್ದರೂ, ಆರೋಗ್ಯ ಇಲಾಖೆ ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದರೂ, ಈ ಬಗ್ಗೆ ಜನಸಾಮಾನ್ಯರು ಅರ್ಥಮಾಡಿಕೊಳ್ಳದೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ವಿಪರ್ಯಾಸವೇ ಸರಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here