ವಿಟ್ಲ: ಕೊರೊನಾ ವೈರಸ್‍ನ ಭೀತಿಯಿಂದ ಜಿಲ್ಲೆಗೆ ಸಂಪೂರ್ಣ ಲಾಕ್‍ಡೌನ್ ಹೇರಿದ್ದ ಕಾರಣ ವಿಟ್ಲ ಪೇಟೆಯಲ್ಲಿ ಮಂಗಳವಾರ ಪೇಟೆಯ ಅರ್ಧದಷ್ಟು ಅಂಗಡಿ ಮುಂಗಟ್ಟುಗಳು, ವ್ಯವಹಾರ ಕೇಂದ್ರಗಳು ತೆರೆದಿದ್ದರೂ, ಮಧ್ಯಾಹ್ಮ್ನ  ಸಂಪೂರ್ಣವಾಗಿ ಮುಚ್ಚಲ್ಪಟ್ಟಿತ್ತು.

ಮಂಗಳವಾರ ಬೆಳಗ್ಗೆ ಕೆಲವು ಅಟೋರಿಕ್ಷಾಗಳು ರಸ್ತೆಗೆ ಇಳಿದಿದ್ದರೂ, ಜನರೇ ಇಲ್ಲದ ಕಾರಣ ಸ್ವಲ್ಪ ಹೊತ್ತಿನಲ್ಲಿ ಮನೆಯ ಕಡೆ ಹೊರಟಿದ್ದವು. ಉಳಿದಂತೆ ವಾಹನ ಸಂಚಾರ ಅತೀ ವಿರಳವಾಗಿತ್ತು.
ಪೊಲೀಸರು ಎಲ್ಲಾ ಕಡೆ ಸುತ್ತಾಡಿ ಅತ್ಯವಶ್ಯಕವಾದ ಮೆಡಿಕಲ್, ಹಾಲು ವಿತರಣ ಕೇಂದ್ರಗಳನ್ನು ಹೊರತು ಪಡಿಸಿ ಉಳಿದಂತೆ ಬಂದ್ ಮಾಡಲು ಸೂಚನೆ ನೀಡಿದರು.
ಅನಗತ್ಯ ಸುತ್ತಾಟಕ್ಕೆ ಕಡಿವಾಣ: ಪೇಟೆಯಲ್ಲಿ ಅನಾವಶ್ಯಕವಾಗಿ ಸುತ್ತಾಡಲು ಬಂದಿದ್ದ ಹಲವರನ್ನು ಪೊಲೀಸರು ವಿಚಾರಿಸಿ, ಗದರಿಸಿ ಮನೆಗೆ ಕಳುಹಿಸುತ್ತಿದ್ದರು. ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‍ನಲ್ಲಿ ನಿಂತ ಪೊಲೀಸರು ಪ್ರತಿಯೊಬ್ಬರಿಗೂ ಮನೆಗೆ ಹೋಗಲು ಸೂಚನೆ ನೀಡಿದರು. ಪೊಲೀಸರ ಮಾತನ್ನು ಮೀರಿದ ಕೆಲ ಮಂದಿಗೆ ಲಾಠಿ ಹಿಡಿದ ಪ್ರಸಂಗವೂ ನಡೆಯಿತು.
ಕಂದಾಯ ಅಧಿಕಾರಿಗಳಿಂದ ಸೂಚನೆ: ಕಂದಾಯ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳೂ ಸಹ ಮಂಗಳವಾರವೂ ಸಹ ಮುಚ್ಚಿರದ ಅಂಗಡಿ ಮಾಲೀಕರಿಗೆ ಮುಚ್ಚಲು ಸೂಚನೆ ನೀಡಿದರು. ಮಧ್ಯಾಹ್ನವಾಗುತ್ತಲೇ ಎಲ್ಲಾ ಅಂಗಡಿಗಳು, ವ್ಯವಹಾರ ಕೇಂದ್ರಗಳೂ ಮುಚ್ಚಿದ್ದವು. ಈ ಮಧ್ಯೆ ಜನರಿಗೆ ಅವಶ್ಯಕವಾಗಿ ಬೇಕಾಗಿದ್ದ ಮೆಡಿಕಲ್ ಅಂಗಡಿಗಳನ್ನು ಮುಚ್ಚಿದ್ದರು. ಪೇಟೆಯಲ್ಲಿ ಯಾರನ್ನೂ ಸಹ ನಿಲ್ಲಲು ಬಿಡುತ್ತಿರಲಿಲ್ಲ. ವಾಹನದಲ್ಲಿ ಸಾಗುವವರನ್ನು ವಿಚಾರಿಸದೇ ಬಿಡುತ್ತಿರಲಿಲ್ಲ. ಮಾ.31ರ ತನಕ ಪೇಟೆಗೆ ಬರಬೇಡಿ ಎಂದೂ ಹೇಳಿ ಕಳುಹಿಸುತ್ತಿದ್ದರು.


ವಾರದ ಸಂತೆ ರದ್ದು: ವಿಟ್ಲದ ವಾರದ ಸಂತೆ ಮಂಗಳವಾರ ನಡೆಯುತ್ತಿದ್ದು, ಇಂದು ಸಂತೆ ಮಾರುಕಟ್ಟೆ ತೆರೆಯಲೇ ಇಲ್ಲ. ಕಳೆದ ಮಂಗಳವಾರದಿಂದಲೇ ಪಟ್ಟಣ ಪಂಚಾಯಿತಿ ಸೂಚನೆ ನೀಡಿತ್ತು. ಆದ ಕಾರಣ ಅಪ್ಪಿತಪ್ಪಿಯೂ ಸಂತೆ ಮಾರುಕಟ್ಟಗೆ ಜನ ಮುಖಮಾಡಲೇ ಇಲ್ಲ.
ಮೆಡಿಕಲ್ ಅಂಗಡಿಗಳು ಬೇಕಿದ್ದವು: ಲಾಕ್‍ಡೌನ್ ಪರಿಣಾಮವಾಗಿ ಎಲ್ಲಾ ಅಂಗಡಿಗಳು ಮುಚ್ಚುತ್ತಾ ಹೋದಂತೆ ಮೆಡಿಕಲ್ ಅಂಗಡಿ ಮಾಲೀಕರೂ ಸಹ ಮಧ್ಯಾಹ್ನವಾಗುತ್ತಿದ್ದಂತೆ ಪೇಟೆಯಲ್ಲಿ ನರಪಿಳ್ಳೆಯೂ ಇಲ್ಲವೆಂದುಕೊಂಡು ಮೆಡಿಕಲ್‍ಗಳಿಗೆ ಬಾಗಿಲು ಹಾಕಿದರು. ಕೆಲ ಜನರು ಮೆಡಿಕಲ್ ಹುಡುಕುತ್ತಾ ಬಂದರೂ ಯಾವೊಂದು ಮೆಡಿಕಲ್ ತೆರೆಯದೇ ಇಲ್ಲದಿರುವುದನ್ನು ಕಂಡು ಮೆಡಿಕಲ್‍ಗಳು ಮುಚ್ಚಿದರೆ ರೋಗಿಗಳ ಗತಿಯೇನು ಎಂದು ಅಳಲು ವ್ಯಕ್ತಪಡಿಸುತ್ತಾ ನಡೆದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here