ಬಿ.ಸಿ.ರೋಡ್ : ಜನವರಿ ತಿಂಗಳಲ್ಲಿ ಬೀಜ ಬಿತ್ತಿ, ಮಾರ್ಚ್ ತಿಂಗಳಲ್ಲಿ ಕಲ್ಲಂಗಡಿ ಹಣ್ಣಿನ ಫಸಲನ್ನು ಪಡೆದು ಅದನ್ನು ಪೊಳಲಿ ಜಾತ್ರೆಯ ಸಂದರ್ಭ ಮಾರಾಟ ಮಾಡಿ ಒಂದಷ್ಟು ಸಂಪಾದನೆ ಮಾಡುತ್ತಿದ್ದ,  ಪೊಳಲಿ ಆಸುಪಾಸಿನ ಕೆಲವು ಕಲ್ಲಂಗಡಿ ಬೆಳೆಯುವ ರೈತರ ಸುಮಾರು 40 ವರ್ಷಗಳಿಗಿಂತ ಹಿಂದಿನಿಂದಲೂ ನಡೆದು ಬರುತ್ತಿದ್ದ ನಿತ್ಯ ಕ್ರಮಕ್ಕೆ ತಡೆಯನ್ನು ಒಡ್ಡಿದ ಈ ವರ್ಷ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಎಂಬ ಮಹಾಮಾರಿ.

ಪೊಳಲಿ ಬ್ರಹ್ಮಕಲಶೋತ್ಸವದ ನಂತರ ಶ್ರೀ ಕ್ಷೇತ್ರಕ್ಕೆ ಬರುವ ದಿನಂಪ್ರತಿ ಆಗಮಿಸುವ ಭಕ್ತಾದಿಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಹಾಗಾಗಿ ಕಲ್ಲಂಗಡಿ ಹಣ್ಣನ್ನು ಕೊಯ್ದು ತಂದು ದೇವಸ್ಥಾನದ ಪಕ್ಕದಲ್ಲೇ ಇರುವ ಮನೆಯ ಎದುರು ಅಂಗಡಿಯ ಎದುರು ರಾಶಿ ಮಾಡಿದರೆ ಅದೇ ದಿನ ಅಷ್ಟೂ ಕಲ್ಲಂಗಡಿ ಹಣ್ಣು ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಮಾತ್ರ ಜನರ ಸಂಖ್ಯೆಯೇ ಕಡಿಮೆಯಾದ ಕಾರಣ ಕಲ್ಲಂಗಡಿ ಹಣ್ಣು ಹಾಗೆಯೇ ರಾಶಿ ಬಿದ್ದಿದೆ.

ಪೊಳಲಿ ಹತ್ತಿರ ಕಲ್ಲಂಗಡಿ ಹಣ್ಣು ಬೆಳೆಯುವವರು ಬೇರೆಯವರ ಬಳಿ ಜಮೀನನ್ನು ಗೇಣಿಗೆ ಪಡೆದು ಅದರಲ್ಲಿ ಬೆಳೆ ಬೆಳೆಯುತ್ತಾರೆ. ಸುಮಾರು ೨೦೦ ಓಳ್ಯ ತೆಗೆಯಬೇಕಾದರೆ 20,000 ರೂಪಾಯಿ ಖರ್ಚಾಗುತ್ತದೆ. ಇನ್ನು ಗಿಡಗಳಿಗೆ ಗೊಬ್ಬರ, ರೋಗ ಬಾರದಂತೆ ತಡೆಯಲು ಒಂದಿಷ್ಟು ಜೆ‘ವಿಕ ಕೀಟನಾಶಕವನ್ನು ಸಿಂಪಡಿಸುತ್ತಾರೆ. ಕೊಯ್ಯುವುದಕ್ಕೆ, ಅದನ್ನು ಗದ್ದೆಯಿಂದ ಮನೆಗೆ ತರುವುದಕ್ಕೆ ಎಲ್ಲದಕ್ಕೂ ಜನ ಬೇಕು. ಹೀಗಾಗಿ ಒಂದು ಸಲ ಬೆಳೆ ಬೆಳೆಯಲು ಸುಮಾರು ಒಂದು ಲಕ್ಷ ಖರ್ಚು ಮಾಡುತ್ತಾರೆ. ಪೊಳಲಿಯಲ್ಲಿ ಒಂದು ತಿಂಗಳ ಜಾತ್ರೆ ಇರುವುದರಿಂದ ಆ ಜಾತ್ರೆಯ ಸಂದರ್ಭ ತಾವು ಬೆಳೆದ ಬೆಳೆ ಮಾರಾಟವಾಗಿ ತಮಗೆ ಲಾಭ ಸಿಗುತ್ತದೆ ಎಂಬ ನಂಬಿಕೆಯಿಂದ ವರ್ಷವೂ ಈ ಬೆಳೆ ಬೆಳೆಯುತ್ತಾರೆ.

ಪೊಳಲಿ ಮಣ್ಣಿನಲ್ಲಿ ಬೆಳೆಸಿದ ಕಲ್ಲಂಗಡಿಯನ್ನು ಪೊಳಲಿಯಲ್ಲಿ ಬಿಟ್ಟು ಹೊರಗಡೆ ಮಾರಾಟ ಮಾಡುವಂತಿಲ್ಲ. ಯಾಕೆಂದರೆ ಇಲ್ಲಿ ಬೆಳೆಸಿದ ಕಲ್ಲಂಗಡಿಯು ಶ್ರೀ ಕ್ಷೇತ್ರದ ಪ್ರಸಾದ ಎಂಬ ಅನಾದಿ ಕಾಲದಿಂದಲೂ ಬಂದಿರುವ ನಂಬಿಕೆಯಾಗಿದೆ. ಜನರಲ್ಲೂ ಪೊಳಲಿ ಜಾತ್ರೆಗೆ ಹೋದರೆ ಅಲ್ಲಿಂದ ಕಲ್ಲಂಗಡಿ ಹಣ್ಣನ್ನು ತರಲೇಬೇಕು ಎಂಬ ಸಂಪ್ರದಾಯವಿದೆ. ಹೀಗಾಗಿ ಯಾರೇ ಜಾತ್ರೆಗೆ ಹೋದರೂ ಕಲ್ಲಂಗಡಿ ಹಣ್ಣನ್ನು ಕೊಳ್ಳುತ್ತಾರೆ. ಒಂದು ತಿಂಗಳು ನಡೆಯುವ ಜಾತ್ರೆಯಲ್ಲಿ ಒಂದು ಬಾರಿಯಾದರೂ ಪೊಳಲಿ ಜಾತ್ರೆಗೆ ಹೋಗಬೇಕು ಎಂಬ ಸಂಪ್ರದಾಯವೂ ಇದೆ. ಆದ್ದರಿಂದ ಒಂದಲ್ಲ ಒಂದು ದಿನ ಎಲ್ಲರೂ ಜಾತ್ರೆಗೆ ಹೋಗುತ್ತಾರೆ. ಆದರೆ ಈ ಬಾರಿ ಮಾತ್ರ ಸರಕಾರದ ಆದೇಶವೂ ಇದೆ. ಜೊತೆಗೆ ಕೊರೊನಾದ ‘ಯದಿಂದ ಬರುವ ಜನರ ಸಂಖ್ಯೆಯೇ ಇಳಿಮುಖವಾಗಿದೆ. ಜೊತೆಗೆ ಹೊರಗಿನಿಂದ ಕೊಳ್ಳಲೂ ಜನ ಹೆದರುತ್ತಾರೆ. ಹೀಗಾಗಿ ಕಲ್ಲಂಗಡಿ ಹಣ್ಣು ಮಾರಾಟವಾಗುವ ಯಾವ ಭರವಸೆಯೂ ಇಲ್ಲ. ಆದರೂ ಮಾರ್ಚ್ 31ರೊಳಗೆ ಎಲ್ಲವೂ ಸರಿಯಾದರೆ ಮತ್ತೆ ಎಪ್ರಿಲ್‌ನಿಂದ 10 ದಿನಗಳ ಜಾತ್ರೆಯಿದ್ದು,  ಆಗಲಾದರೂ ಮಾರಾಟವಾಗಬಹುದು ಎಂಬ ಆಶಾವಾದವನ್ನೂ ಇಟ್ಟುಕೊಂಡಿದ್ದಾರೆ. ಹೆಚ್ಚು ದಿನ ಕಲ್ಲಂಗಡಿ ಹಣ್ಣನ್ನು ಇಟ್ಟರೆ ಅದು ಅಲ್ಲೇ ಕೊಳೆತು ಹೋಗುತ್ತದೆ ಎನ್ನುವ ಆತಂಕವೂ ಅವರನ್ನು ಕಾಡುತ್ತಾ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here