Sunday, October 22, 2023

ಮಾನವೀಯತೆ ಇಲ್ಲದ ಗ್ರಾ.ಪಂ. ಮಹಿಳೆ ಮನೆಯ ಛಾವಣಿಗೆ ತಾಗಿಕೊಂಡು ಬಸ್ ನಿಲ್ದಾಣ ನಿರ್ಮಾಣ: ಗ್ರಾಮಾಸ್ಥರಿಂದ ಭಾರೀ ವಿರೋಧ

Must read

ಬಂಟ್ವಾಳ: ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿರೋಧಗಳು ವ್ಯಕ್ತವಾಗಿದ್ದು, ಇಂದು ಬೆಳಿಗ್ಗೆ ಕೆಲಹೊತ್ತು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಅಗಮಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
ಘಟನೆಯ ವಿವರ:
ಪಿಲಿಮುಗೇರು ಗ್ರಾಮದ ಚೆನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ವಾಮದಪದವು ಎಂಬಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮಹಿಳೆಯೋರ್ವಳ ಮನೆಗೆ ತಾಗಿಕೊಂಡು ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವುದು ಸರಿಯಲ್ಲ ಎಂದು ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು.
ಚೈನೈತ್ತೋಡಿ ಗ್ರಾಮ ಪಂಚಾಯತ್ ಗೆ ಸೇರಿದೆ ಎನ್ನಲಾದ ರಸ್ತೆ ಅಂಚಿನಲ್ಲಿ ಇರುವ ಕಟ್ಟಡದಲ್ಲಿ ಬಸ್ ನಿಲ್ದಾಣದ ನಿರ್ಮಾಣವಾಗುತ್ತಿದೆ.
ಈ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಬಾಡಿಗೆಗೆ ಸೈಕಲ್ ಅಂಗಡಿಯೊಂದು ಕಾರ್ಯಚರಿಸುತ್ತಿತ್ತು. ಆದರೆ ಅವರಿಗೆ ಯಾವುದೇ ಸೂಚನೆ ನೀಡದೆ ಏಕಾಏಕಿ ಸೈಕಲ್ ಅಂಗಡಿಯನ್ನು ಬಿಡುವಂತೆ ಹೇಳಿದರು. ಬಳಿಕ ಸೈಕಲ್ ಅಂಗಡಿಯನ್ನು ಕೆಡವಿ ಆ ಜಾಗದ ಜೊತೆಗೆ ಇನ್ನಷ್ಟು ಜಾಗವನ್ನು ಅತಿಕ್ರಮಣ ಮಾಡಿದ ಪಂಚಾಯತ್ ಬಸ್ ನಿಲ್ದಾಣ ಕಾಮಗಾರಿ ಅರಂಭಿಸಿದೆ.
ಆದರೆ ಬಸ್ ನಿಲ್ದಾಣದ ಅಲ್ಲೇ ಹಲವಾರು ವರ್ಷಗಳಿಂದ ವಾಸವಾಗಿರುವ ಮಹಿಳೆಯೋರ್ವರ ಮನೆಯ ಛಾವಣಿಯ ಮೇಲೆ ಬಂದಿದೆ. ಇದರಿಂದ ಮಹಿಳೆಗೆ ತೊಂದರೆಯಾಗಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ವಿರೋಧವಿಲ್ಲ, ಆದರೆ ಹಳೆಯ ಕಟ್ಟಡದ ಜಾಗದಲ್ಲಿಯೇ ಬಸ್ ನಿಲ್ದಾಣ ನಿರ್ಮಾಣ ಮಾಡಿ ಬದಲಾಗಿ ಆ ಕಟ್ಟಡದ ಅಡಿ ಭಾಗದಿಂದ ಹೆಚ್ಚುವರಿಯಾಗಿ ಜಮೀನು ಅತಿಕ್ರಮಣ ಮಾಡಿ ಬಡ ಮಹಿಳೆಗೆ ತೊಂದರೆ ಕೊಡುವ ನಿಟ್ಟಿನಲ್ಲಿ ಅವರ ಮನೆಯ ಛಾವಣಿ ಮೇಲೆ ಬಸ್ ನಿಲ್ದಾಣದ ಸೀಟು ಬರುವ ರೀತಿಯಲ್ಲಿ ಮಾಡಿರುವುದು ನ್ಯಾಯವೇ ಎಂದು ಅವರ ಪ್ರಶ್ನೆಯಾಗಿದೆ.
ಪ್ರಸ್ತುತ ಬಸ್ ನಿಲ್ದಾಣ ಒಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಅಪಘಾತಕ್ಕೆ ಇದು ಅಹ್ವಾನವಾಗಿದೆ, ಹಾಗಾಗಿ ಇಲ್ಲಿ ಬಸ್ ನಿಲ್ದಾಣ ಅಗತ್ಯವೂ ಇಲ್ಲ ಎಂಬುದು ಅವರ ಆರೋಪವಾಗಿದೆ.

ಚೈನೈತ್ತೋಡಿ ಗ್ರಾ.ಪಂ.ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯತ್ ಆಡಳಿತದ ಏಕಪಕ್ಷೀಯ ನಿರ್ಧಾರ ದಿಂದ ಅನಗತ್ಯವಾಗಿ ಬಸ್ ನಿಲ್ದಾಣ ದ ನಿರ್ಮಾಣ ನಡೆಯುತ್ತಿದೆ ಎಂದು ಇವರ ಆರೋಪವಾಗಿದೆ. ಸ್ಥಳಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಸ್ ನಿಲ್ದಾಣ ನಿರ್ಮಾಣ ಸರಿಯಾದ ಕ್ರಮವಲ್ಲ ಎಂದು ಅಲ್ಲಿನ ಪಿ.ಡಿ.ಒ.ಗೆ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಗ್ರಾ.ಪಂ.ಸದಸ್ಯ ವಿಶ್ವನಾಥ ಶೆಟ್ಟಿ, ಪ್ರಮುರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್, ಗೋಪಾಲಕೃಷ್ಣ ಚೌಟ, ತಿಮ್ಮಪ್ಪ ಪೂಜಾರಿ, ಪ್ರಭಾಕರ ಶೆಟ್ಟಿ, ಸಂತೋಷ್ ಜೈನ್, ಪ್ರತಾಪ್ ಶೆಟ್ಟಿ ಕಕ್ಕಿಬೆಟ್ಟು ಹಾಗೂ ಸ್ಥಳೀಯರು ಹಾಜರಿದ್ದರು.

More articles

Latest article