ಬಂಟ್ವಾಳ : ಗ್ರಾಮಸ್ಥರ ಭಾರೀ ವಿರೋಧದ ನಡುವೆಯೂ ಸಜಿಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಡಂಪಿಂಗ್ ಯಾರ್ಡ್ ನಲ್ಲಿ ಬಂಟ್ವಾಳ ಪುರಸಭೆಯಿಂದ ಮಂಗಳವಾರ ಸಂಜೆ ತ್ಯಾಜ್ಯ ಹಾಕಲಾಗಿದ್ದು ಈ ವೇಳೆ ವಿರೋಧ ವ್ಯಕ್ತಪಡಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಕಂಚಿನಡ್ಕ ಪದವು ಡಂಪಿಂಗ್ ಯಾರ್ಡ್ ನಲ್ಲಿ ಪುರಸಭೆ ಹಲವು ಬಾರಿ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸಿತ್ತಾದರೂ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರ ವಿರೋಧದಿಂದ ಅದು ವಿಫಲವಾಗಿತ್ತು. ಆದರೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರು ಮಾ.16ರಿಂದಲೇ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡುವಂತೆ ಪುರಸಭಾ ಅಧಿಕಾರಿಗಳಿಗೆ ಆದೇಶ ನೀಡಿದ್ದರು.
ಆದರೆ ಇದನ್ನು ಕಟುವಾಗಿ‌ ವಿರೋಧಿಸಿದ್ದ ಸಜಿಪನಡು ಗ್ರಾಮಸ್ಥರು ಡಂಪಿಂಗ್ ಯಾರ್ಡ್ ಪರಿಸರದಲ್ಲಿ ಇರುವ ಮನೆಗಳನ್ನು, ಶಾಲೆ, ಅಂಗನವಾಡಿಯನ್ನು ತೆರವುಗೊಳಿಸಿ ಬೇರೆಡೆ ಪುನರ್ ವಸತಿ ಕಲ್ಪಿಸಬೇಕು, ಈಗಾಗಲೇ ಪುರಸಭೆಯ ಮುಂದೆ ಇರಿಸಿದ್ದ 21 ಬೇಡಿಕೆಗಳನ್ನು‌ ಈಡೇರಿಸಿದ ಬಳಿಕವೇ ತ್ಯಾಜ್ಯ ಸಂಸ್ಕರಣೆ ಮಾಡಬೇಕು ಎಂದು ಹೇಳಿತ್ತು. ಒಂದು ವೇಳೆ ಕಸದ ಲಾರಿ ಬಂದರೆ ತಡೆಯುವುದಾಗಿ ಹೇಳಿತ್ತು.
ಅದರಂತೆ ನೂರಕ್ಕೂ ಅಧಿಕ ಪೊಲೀಸ್ ಬಂದೋಬಸ್ತ್ ನಲ್ಲಿ ತ್ಯಾಜ್ಯವನ್ನು ಡಂಪ್ ಮಾಡಲಾಯಿತು.
ಮಾತಿನ ಚಕಮಕಿ- ಎಳೆದಾಟ
ಡಂಪಿಂಗ್ ಯಾರ್ಡ್ ನ ಗೇಟ್ ಮುಂಭಾಗದಲ್ಲಿ ಮಹಿಳೆಯರು, ಮಕ್ಕಳೆನ್ನದೆ ಸುಮಾರು 100 ಕ್ಕೂ ಅಧಿಕ ಮಂದಿ ನೆರೆದಿದ್ದು, ಪುರಸಭೆಯ ಕ್ರಮವನ್ನು ಖಂಡಿಸಿದರು. ಆರಂಭದಲ್ಲಿ ಪ್ರತಿಭಟನಾಕಾರರ ಮನವೊಲಿಕೆಗೆ ಬಂದ‌ ಪುರಸಭಾ ಪರಿಸರ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಕಳೆದ 10 ವರ್ಷಗಳಲ್ಲಿ ನೀಡಿರುವ ಯಾವುದೇ ಮಾತನ್ನು ನಡೆಸಿಕೊಡದೆ, ವಂಚಿಸುತ್ತಿರುವ ಪುರಸಭೆ ಸಜಿಪನಡು ಗ್ರಾಮಸ್ಥರನ್ನು ವಂಚಿಸುತ್ತಿದೆ. ಹೀಗಾಗಿ ಕೆಲಸ ಆರಂಭಿಸಿದ ಬಳಿಕವಷ್ಟೇ ತ್ಯಾಜ್ಯ ತನ್ನಿ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಡಿವೈಎಸ್ಪಿ ವೆಲೈಂಟಿನ್ ಡಿಸೋಜ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಅವರು ಜಗ್ಗಲಿಲ್ಲ. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾ ಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಯಲ್ಲಿ ತ್ಯಾಜ್ಯದ ಲಾರಿಯನ್ನು ಗೇಟ್ ನಿಂದ ಕೊಂಡೊಯ್ಯುವ ಉದ್ದೇಶದಿಂದ ನೆರೆದಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಎಳೆದೊಯ್ದು ವಶಕ್ಕೆ ತೆಗೆದುಕೊಂಡರು. ಈ ವೇಳೆ ಸಜಿಪನಡು ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸೀರ್ ಸಹಿತ 30 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದರು. ಈ ವೇಳೆ ಲಾರಿಗೆ ಅಡ್ಡವಾಗಿ ರಸ್ತೆಯಲ್ಲಿ ಮಕ್ಕಳ‌ ಜೊತೆ ಧರಣಿ ಕುಳಿತಿದ್ದ ಮಹಿಳೆಯರನ್ನು ಪೊಲೀಸರು ಬಲವಂತಾಗಿ ಎಳೆದೊಯ್ದು, ಚದುರಿಸಿದರು.
ಒಂದೆಡೆ ಕೊರೋನಾ ಭೀತಿಯಿಂದ ಜನರಲ್ಲಿ ಆತಂಕ ಎದುರಾಗಿದೆ, ಇಂತಹಾ ಸನ್ನಿವೇಶದಲ್ಲಿ ಪುರಸಭೆ ಹಿತವನ್ನು ಕಾಯುವ ಬದಲು ಸ್ವಪ್ರತಿಷ್ಠೆಗಾಗಿ ಸಜಿಪನಡುವಿಗೆ ಕಸ ತಂದು ಹಾಕುತ್ತಿದೆ ಇದು ಮಾನವೀಯತೆಗೆ ವಿರುದ್ಧವಾದ ಕೆಲಸ ಎಂದು‌ ಪ್ರತಿಭಟನಾಕಾರರು ಆರೋಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here