


ಪುತ್ತೂರು: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಮೂಲ ಸಮಾದಿ ಇರುವ ಪಡುಮಲೆ ಎರುಕೊಟ್ಯ, ಬೆರ್ಮೆರೆ ಗುಡಿ, ತೀರ್ಥಬಾವಿ ಹಾಗೂ ನಾಗನಕಟ್ಟೆ ಸಾನಿಧ್ಯಗಳಿರುವ ಸ್ಥಳದ ಹಕ್ಕುದಾರರಾದ ಮೇಘನಾಥ ಶೆಟ್ಟಿ ಮತ್ತು ಕುಟುಂಬದ 9 ಜನ ಹಕ್ಕುದಾರರು ನಿನ್ನೆ ಮಾ.16 ರಂದು ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿರುವ ಉಪನೋಂದಣೆ ಅಧಿಕಾರಿ ಕಛೇರಿಯಲ್ಲಿ ಪಡುಮಲೆಯ ದೇಯಿ ಬೈದೆದಿ ಸಮಾಧಿಯ ಪುಣ್ಯ ಸ್ಥಳ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ.)ನ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಅವರಿಗೆ ಇದರ ಹಕ್ಕು ಪತ್ರದ ದಾಖಲೆಗಳನ್ನು ದಾನದ ರೂಪದಲ್ಲಿ ರಿಜಿಸ್ಟ್ರಾರ್ ಕಚೇರಿಯ ಮುಂದೆ ಪಡುಮಲೆಯ ಅಭಿವೃದ್ಧಿ ಸಮಿತಿಯ ಹೆಸರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಗೌರವ ಅಧ್ಯಕ್ಷ ಮಾಜಿ ಶಾಸಕ ಎ. ರುಕ್ಮಯ್ಯ ಪೂಜಾರಿ, ಪ್ರ.ಕಾರ್ಯದರ್ಶಿ ಪುತ್ತೂರಿನ ಶ್ರೀಧರ ಪಟ್ಲ ,ಖಂಚಾಚಿ ಬೆಳ್ತಂಗಡಿಯ ಶೈಲೇಶ್, ಸಂಚಾಲಕ ರತನ್ ನ್ಯಾಕ್, ಗ್ರಾ.ಪಂ. ಸದಸ್ಯರಾದ ಗುರುಪ್ರಸಾದ್ ರೈ ಹಾಗೂ ನವೀನಚಂದ್ರ ರೈ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.





