ಧರ್ಮಸ್ಥಳ: ಹಿರಿಯ ಪತ್ರಕರ್ತ ಹಾಗೂ ಕನ್ನಡ ಪರ ಹೋರಾಟಗಾರ ಡಾ. ಪಾಟೀಲ ಪುಟ್ಟಪ್ಪನವರು ನಿಧನರಾದ ಸುದ್ಧಿ ತಿಳಿದು ವಿಷಾದವಾಯಿತು. ಪತ್ರಿಕೋದ್ಯಮದೊಂದಿಗೆ ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆ ಬಗ್ಗೆ ಖಚಿತ ನಿಲುವು ಹೊಂದಿದ್ದ ಅವರು ಕನ್ನಡ ಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಕನ್ನಡ ವಾರ ಪತ್ರಿಕೆಗಳು ಹೆಚ್ಚು ಪ್ರಸಾರವಿಲ್ಲದ ಕಾಲದಲ್ಲಿ ಪ್ರಪಂಚ ಎಂಬ ವಾರ ಪತ್ರಿಕೆಯನ್ನು ಅವರು ದೀರ್ಘ ಕಾಲ ನಡೆಸಿದರು. ಅದರಲ್ಲಿ ಪ್ರಕಟವಾಗುತ್ತಿದ್ದ ಇದುವೆ ಜೀವನ, ಇದುವೆ ಜಗತ್ತು ಅಂಕಣ ಬರಹಗಳನ್ನು ನಾನು ತಪ್ಪದೇ ಓದುತ್ತಿದ್ದೆ. ಅದಲ್ಲದೆ ಅವರ ಸ್ಮರಣ ಶಕ್ತಿ ಬಗ್ಗೆ ನನಗೆ ಅಚ್ಚರಿ ಮೂಡುವ ರೀತಿಯಲ್ಲಿ ಅವರು ತಮ್ಮ ಲೇಖನಗಳಲ್ಲಿ ಕರಾರುವಕ್ಕಾಗಿ ಇಸವಿ ಹಾಗೂ ಘಟನೆಗಳನ್ನು ವಿವರಿಸುತ್ತಿದ್ದರು.
ಅವರೊಂದಿಗೆ ಸಂಭಾಷಣೆ ಮಾಡುವಾಗ ವಿಶ್ವಕೋಶವೇ ತೆರೆದುಕೊಳ್ಳುತ್ತಿತ್ತು. ಸಂದರ್ಭೋಚಿತವಾಗಿ, ಸ್ಪಷ್ಟವಾಗಿ ವ್ಯಕ್ತಿಯ ಹೆಸರು, ವಿಚಾರಗಳು, ಅದರಿಂದಾದ ಪರಿಣಾಮಗಳನ್ನು ವಿವರವಾಗಿ ಉಲ್ಲೇಖಿಸುತ್ತಿದ್ದರು. ಅವರ ನಿಧನದಿಂದ ಕರ್ನಾಟಕದ ಮತ್ತು ನಮ್ಮ ದೇಶದ ಅನೇಕ ಮಾಹಿತಿಗಳು ಹಾಗೂ ವಿಚಾರಗಳ ಜ್ಞಾನಕೋಶವೇ ಕಣ್ಮರೆಯಾದಂತಾಗಿದೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ
ಅವರು ಸಂತಾಪ ಸೂಚಿಸಿದರು.

ಚಿತ್ರ: 1984 ರಲ್ಲಿ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನವನ್ನು ಪಾಟೀಲ ಪುಟ್ಟಪ್ಪನವರು ಉದ್ಘಾಟಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here