ಮಂಗಳೂರು: ಕೊವಿಡ್-೧೯ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವ ಶ್ರೀರಾಮುಲು‌ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ (ಐಸೋಲೇಷನ್ ವಾರ್ಡ್) ಪ್ರತ್ಯೇಕ ನಿಗಾ ಘಟಕದ ಪರಿಶೀಲನೆ ನಡೆಸಿ, ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸೋಂಕಿನ ‌ಬಗ್ಗೆ ಯಾರೂ ಭಯ-ಭೀತರಾಗುವುದು ಬೇಡ. ರಾಜ್ಯದ ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇವೆ. ಸರ್ಕಾರ ಮುನ್ನೆಚ್ಚರಿಕೆ ದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ. ಈ ಸಂದರ್ಭ ಎಲ್ಲೂ ಹೊರಗಡೆ ತೆರಳದೆ ಮನೆಯಲ್ಲಿದ್ದೇ ಎಲ್ಲರೂ ಸುರಕ್ಷಿತವಾಗಿರಿ. ಸದ್ಯಕ್ಕೆ ಸಿಎಂ ಸೂಚನೆಯಂತೆ‌ ರಜೆ ಒಂದು ವಾರಗಳ ಕಾಲ ಮುಂದುವರಿಯಲಿದೆ. ಮುಂದೆ ಮತ್ತೊಂದು ಸಭೆ ನಡೆಯಲಿದ್ದು, ರಜೆ ಮುಂದುವರಿಯುವ ಬಗ್ಗೆ ಆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೊರೊನಾ ಬಂದ ತಕ್ಷಣ ಸಾವು ಬರುತ್ತದೆ ಎಂಬ ಭಯ ಎಲ್ಲರಲ್ಲಿದೆ. ನೂರು ಮಂದಿ ಸೋಂಕಿತರಲ್ಲಿ ಇಬ್ಬರಿಗೆ ತೊಂದರೆ ಆಗಬಹುದು. ಅವರಿಗೂ ಏನೂ ಆಗೋಲ್ಲ. ಅಂಕಿ ಅಂಶಗಳ ಪ್ರಕಾರ 10 ಮಂದಿಗೆ ಕೊರೊನಾ ಪಾಸಿಟಿವ್ ಇದ್ದರೂ, ಅವರೂ ರೋಗದಿಂದ ಗುಣಮುಖರಾಗುತ್ತಿದ್ದಾರೆ. ವಿದೇಶಕ್ಕೆ ಹೋಗಿ ಭಾರತಕ್ಕೆ ಬಂದವರಲ್ಲಿ ಕೊರೊನಾ ಸೋಂಕು ಇದ್ದವರ ಸಂಪರ್ಕ ಹೊಂದಿದವರಿಗೆ ಈ ರೋಗ ಬಂದಿದೆಯೇ ಹೊರತು. ರೋಗ ಇಲ್ಲಿಯೇ ಉಲ್ಬಣವಾದದ್ದಲ್ಲ. ಬಿಸಿಲೂ ಅಧಿಕವಾಗಿರೋದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ ಎಂದರು‌.ಮುನ್ನೆಚ್ಚರಿಕೆ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಸೂಚನೆಯಂತೆ ಕೈತೊಳೆಯೋದು, ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಇಡೋದು, ಕಫ, ಜ್ವರ, ನೆಗಡಿ ಬಂದವರು ತಕ್ಷಣ ವೈದ್ಯರನ್ನು ಕಾಣುವುದು, ಸೋಂಕಿನ ಲಕ್ಷಣ ಇದ್ದಲ್ಲಿ ಮಾತ್ರ ಮಾಸ್ಕ್ ಧರಿಸೋದು ಒಳಿತು. ಕಾಸರಗೋಡು ವ್ಯಕ್ತಿಗೆ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿದ್ದು, ಆತ ಮಂಗಳೂರು ಸುತ್ತಮುತ್ತ ಅಡ್ಡಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆದಷ್ಟು ಬೇಗ ಆ ವ್ಯಕ್ತಿಯನ್ನು ಪತ್ತೆ ಹಚ್ಚುವ ಕೆಲಸ ಮಾಡಿ, ಆತನನ್ನು ಹಾಗೂ ಆತ ಯಾರನ್ನೆಲ್ಲಾ ಸಂಪರ್ಕಿಸಿದ್ದಾನೋ ಅವರನ್ನೆಲ್ಲಾ ಐಸೋಲೇಟೆಡ್ ವಾರ್ಡ್​ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುವುದು ಎಂದು‌ ಶ್ರೀರಾಮುಲು ತಿಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here