



ವಿಟ್ಲ: ಮತೀಯ ಬೇಧ ಭಾವ ತೊರೆದು ಮಾನವೀಯ ಧರ್ಮ ಮೆರೆಯಬೇಕೆಂಬ ಸಂದೇಶವನ್ನು ಶಿಬಿರಗಳು ನೀಡುತ್ತದೆ. ಸಮಾಜಕ್ಕೆ ಅಗತ್ಯವಾದ ವಿಚಾರಗಳು ಧರ್ಮಾತೀತ, ಪಕ್ಷಾತೀತವಾಗಿ ನಡೆಯಬೇಕು. ಕೊರೊನಾ ವೈರಸ್ ನಿಂದ ಜಗತ್ತು ಮುಕ್ತವಾಗಲು ಸರ್ವರ ಸಹಕಾರಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಭಾನುವಾರ ಮಾಣಿಲ ಗ್ರಾಮ ಪಂಚಾಯಿತಿ, ಕೆಎಂಸಿ ಹಾಸ್ಪಿಟಲ್ ಬ್ಲಡ್ ಬ್ಯಾಂಕ್, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ, ಪೆರುವಾಯಿ ಫಾತಿಮಾ ಮಾತೆಯ ದೇವಾಲಯ, ಶ್ರೀಕ್ಷೇತ್ರ ಕುಕ್ಕಾಜೆ, ಜುಮ್ಮಾ ಮಸೀದಿ ಮಾಣಿಲ, ಸೌಹಾರ್ಧ ಫ್ರೆಂಡ್ಸ್ ಕ್ಲಬ್ ಹಾಗೂವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶಿಬಿರವನ್ನು ಉದ್ಘಾಟಿಸಿದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಧರ್ಮಗುರುಗಳಾದ ವಿಶಾಲ್ ಮೋನಿಸ್ ಮಾತನಾಡಿ ರಕ್ತದಾನ ಸಾಮರಸ್ಯತೆಯ ಸಂಕೇತವಾಗಿದ್ದು, ಜಾತಿಧರ್ಮಕ್ಕನುಗುಣವಾಗಿ ರಕ್ತ ವಿಂಗಡನೆಯಾಗುವುದಿಲ್ಲ. ಜನರ ಅವಶ್ಯಕತೆಯನ್ನು ಪೂರೈಸುವ ಶಿಬಿರಗಳು ಸಮಾಜಕ್ಕೆ ಬಹಳಷ್ಟು ಅವಶ್ಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ವಹಿಸಿದ್ದರು. ಸುಮಾರು ೭೫ ಮಂದಿ ರಕ್ತದಾನದಲ್ಲಿ ಪಾಲ್ಗೊಂಡರು. ಪೆರುವಾಯಿ ಜುಮಾ ಮಸೀದಿಯ ಮಹಮ್ಮದ್ ಶರೀಫ್ ಮದನಿ ಮಾತನಾಡಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದುರುದ್ದೀನ್ ಎಂ. ಎನ್., ಪೆರುವಾಯಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣ ಮೂರ್ತಿ, ಮಾಣಿಲ ಜಿಎಚ್ಎಸ್ ದೈಹಿಕ ಶಿಕ್ಷಣ ಶಿಕ್ಷಕ ಉಮಾನಾಥ ಶೆಟ್ಟಿ ಎಂ., ಪಂಚಾಯಿತಿ ಸದಸ್ಯರಾದ ನಡುಮನೆ ಮಹಾಬಲ ಭಟ್, ಕೃಷ್ಣಪ್ಪ ಎಂ. ಮತ್ತಿತರರು ಉಪಸ್ಥಿತರಿದ್ದರು.
ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿಸೋಜ ಸ್ವಾಗತಿಸಿದರು. ಮಾಣಿಲ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ ಬಾಳೆಕಲ್ಲು ವಂದಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.






