ವಿಟ್ಲ: ಧರ್ಮ ಪ್ರಜ್ಞೆ, ದೇಶಾಭಿಮಾನ ನಮ್ಮೆಲ್ಲರಲ್ಲಿಯೂ ಸದಾ ಜಾಗೃತಿಯಾಗಿರಬೇಕು. ದೇಶ, ಸಾಮಾಜಿಕ ಸ್ವಾಸ್ಥ್ಯದ ಉದ್ದೇಶದಿಂದ ಎಲ್ಲೆಡೆ ಸಾರ್ವತ್ರಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಇದೇ ಕಾರಣದಿಂದ ವಿಟ್ಲದಲ್ಲಿ ಭಾನುವಾರ ನಡೆಯಬೇಕಾಗಿದ್ದ ವಿರಾಟ್ ಹಿಂದೂ ಸಮಾಜೋತ್ಸವವನ್ನು ಸಹ ಮುಂದೂಡಲಾಗಿದೆ. ಮತ್ತೆ ಇದು ವಿರಾಟ್ ಸ್ವರೂಪದಲ್ಲಿಯೇ ನಡೆಯಲಿದೆ ಎಂದು ಮಧ್ಯಪ್ರದೇಶದ ಭೋಪಾಲ್ ಸಂಸದೆ ಸಾಧ್ವೀ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು.
ಅವರು ಕೊರೊನಾ ಭೀತಿಯಿಂದ ಸರಕಾರ ಎಚ್ಚರಿಕೆಯ ಆದೇಶ ನೀಡಿರುವುದರಿಂದ ವಿಟ್ಲದಲ್ಲಿ ಮಾ.೧೫ರಂದು ವಿಟ್ಲದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಸ್ಥಗಿತಗೊಳಿಸಿದ್ದ ಕಾರಣ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ.ಹರೀಶ್ ನಾಯಕ್ ಅವರ ಮನೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. ಸಮಾಜೋತ್ಸವಕ್ಕಾಗಿ ಆಗಮಿಸಿ, ಕೆಲವು ದೇಗುಲಗಳನ್ನು ಸಂದರ್ಶಿಸಿದ ಬಳಿಕ ಮಧ್ಯಾಹ್ನ ವಿಟ್ಲಕ್ಕೆ ತಲುಪಿದರು.
ಸ್ವಾಗತಿಸುವಾಗ ತುಳಸಿ ಹಾರ ಹಾಕಿದ್ದು, ಅದರ ಸುಗಂಧವನ್ನು ಆಸ್ವಾದಿಸಿದಾಗ ನನಗೆ ನಿರೋಗಿಯ ಅನುಭವವಾಯಿತು. ದೇಶದಲ್ಲಿ ಶ್ರೇಷ್ಠವಾದ ತುಳಸಿ, ಗೋವು, ಗಂಗಾಜಲವಿದ್ದು, ಇದು ರೋಗರಹಿತರನ್ನಾಗಿಸುವ ಅಮೃತ ಔಷಧೀಯ ವಸ್ತುಗಳು ಎಂದು ತಿಳಿಸಿದರು.
ಅವರು ದೇಶ, ಧರ್ಮ ನಮ್ಮದು. ಹಿಂದುತ್ವದ ಪರಂಪರೆಗನುಗುಣವಾಗಿ ಅವುಗಳ ರಕ್ಷಣೆ ನಮ್ಮದು. ಹಿಂದುತ್ವಕ್ಕಾಗಿ ಹಿಂದುತ್ವದ ಚೈತನ್ಯಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ಆದರೆ ಕೊರೊನಾ ಭೀತಿಯ ಕಾರಣಕ್ಕೆ ಸರಕಾರ ಸಾರ್ವಜನಿಕ ಕಾರ್ಯಕ್ರಮವನ್ನು ನಿಷೇಧಿಸಿದೆ ಎಂದು ಸ್ಪಷ್ಟಪಡಿಸಿದರು.
ಕೊರೋನಾ ರೋಗದಿಂದ ಮೃತಪಟ್ಟವರ ಆತ್ಮಸದ್ಗತಿಗಾಗಿ ಮತ್ತು ಅವರ ಕುಟುಂಬಕ್ಕೆ ದುಃಖ, ಕಷ್ಟ ಸಹಿಸುವ ಶಕ್ತಿ ಕೊಡಲಿ. ಈ ದುಃಖ, ಕಷ್ಟ ಇನ್ನಾರಿಗೂ ಬರದೇ ಇರಲಿ. ಇನ್ನಾವ ಜೀವವೂ ಕೊರೋನಾ ರೋಗಕ್ಕೆ ಬಲಿಯಾಗದಿರಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ವಿಟ್ಲ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ.ಹರೀಶ್ ನಾಯಕ್ ವಿಟ್ಲ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಿಟ್ಲ, ಅಕ್ಷಯ್ ಆರ್ಯನ್ ರಾಥೋಡ್, ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್, ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅವರನ್ನು ವೀಕ್ಷಿಸಲು ಬಂದಿದ್ದ ಅನೇಕ ಹಿಂದೂ ಬಾಂಧವವರೊಡನೆ ಮಾತುಕತೆ ನಡೆಸಿ, ತೆರಳಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here