ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಒಣ ಕಸವನ್ನು ಸೋಮವಾರದಿಂದ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಸಂಸ್ಕರಿಸಲು ಮಂಗಳೂರು ಸಹಾಯಕ ಆಯುಕ್ತರು ಖಡಕ್ ಅದೇಶ ನೀಡಿದ ಹಿನ್ನೆಲೆಯಲ್ಲಿ, ಗ್ರಾಮಸ್ಥರ ಪ್ರತಿಭಟನೆ ಕಾವೇರಿದೆ.
ಸೋಮವಾರದಿಂದಲೇ ತ್ಯಾಜ್ಯ ಸಂಸ್ಕರಣೆ ನಡೆಸಲಾಗುತ್ತದೆ ಎಂಬ ಮಾಹಿತಿ‌ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಯಿಂದಲೇ ಸ್ಥಳದಲ್ಲಿ ಬಾರೀ ಜನ ಜಮಾಯಿಸಿದ್ದರು.
ನ್ಯಾಯಾಲಯದ ಅದೇಶದಂತೆ ಕಂಚಿನಡ್ಕ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಒಣಕಸವನ್ನು ಸ್ಥಳೀಯರಿಗೆ ಯಾವುದೇ ಸಮಸ್ಯೆ ಯಾಗದಂತೆ ವೈಜ್ಞಾನಿಕ ಮಾದರಿಯಲ್ಲಿ ಸಂಸ್ಕರಿಸಲು ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರು ಶನಿವಾರ ನಡೆದ ಸಭೆಯಲ್ಲಿ ಆದೇಶಿಸಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿ ದರೆ ಅಂತಹ ವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಲು ಅವರು ತಿಳಿಸಿದ್ದರು.
ಆದರೆ ಇಲ್ಲಿನ‌ ಸಮಸ್ಯೆ ನಿವಾರಿಸದೆ ಪರಿಸರ ಇಲಾಖೆಯ ನಿಬಂಧನೆಗಳನ್ನು ಪಾಲಿಸದೆ ಇಲಾಖೆ ತ್ಯಾಜ್ಯ ವನ್ನು ಇಲ್ಲಿ ಹಾಕಲು ನಾವು ಬಿಡೋದಿಲ್ಲ, ಪ್ರತಿಭಟನೆ ನಡೆಸುತ್ತೇವೆ ಎಂದು ಸಜೀಪ ನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸಿರ್ ಅವರು ತಿಳಿಸಿದ್ದರು.
ಅದರಂತೆ ಇಂದು ಇಲ್ಲಿನ ಮಹಿಳೆಯರು, ಮಕ್ಜಳು ಸೇರಿದಂತೆ ಗ್ರಾಮಸ್ಥರು ಜಮಾಯಿಸಿದ್ದಾರೆ.

ಬಾರದ ಕಸ

ಆದರೆ ಮಧ್ಯಾಹ್ನದ ವರೆಗೆ ಪುರಸಭೆಯ ತ್ಯಾಜ್ಯ ವಾಹನ ಕಂಚಿನಡ್ಕ ಪದವಿಗೆ ಹೋಗಿರಲಿಲ್ಲ. ತ್ಯಾಜ್ಯ ತುಂಬಿದ ವಾಹನ ಬಂದರೆ ವಾಪಾಸು ಕಳುಹಿಸುವ ಎಚ್ಚರಿಕೆ ಯನ್ನು ಗ್ರಾ.ಪಂ.ಅಧ್ಯಕ್ಷ ನಾಸಿರ್ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಹೆಚ್ಚುವರಿ ಬಂದೋಬಸ್ತ್ ಒದಗಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here