ಬಂಟ್ವಾಳ: ಸಜೀಪನಡು ಕಂಚಿನಡ್ಕ ಪದವಿನಲ್ಲಿ ಉದ್ದೇಶಿತ ಘನತಾಜ್ಯ ವಿಲೇವಾರಿ ಘಟಕದ ಕಾಮಗಾರಿ ಇನ್ನೂ ಸಂಪೂರ್ಣಗೊಳ್ಳದೇ ಈ ಸ್ಥಳದಲ್ಲಿ ಬಂಟ್ವಾಳ ಪುರಸಭೆಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ವಿರುದ್ಧ ಗ್ರಾಮದ ಮಹಿಳೆಯರು ಸೇರಿ ಇಂದು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜೀಪ ಅವರು, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ಕಮೀಷನ್ ಅವರು ಬಂಟ್ವಾಳ ಪುರಸಭೆಯಲ್ಲಿ ಸಜೀಪನಡು ಗ್ರಾಮದ ಮುಖಂಡರನ್ನು ಕರೆದು ಸಭೆ ನಡೆಸಿ ತಮ್ಮ ಸಮ್ಮುಖದಲ್ಲಿಯೇ ಪುರಸಭೆಯ ಅಧಿಕಾರಿಗಳೊಂದಿಗೆ, ನೀವು ಸೋಮವಾರದಿಂದ ತ್ಯಾಜ್ಯಗಳನ್ನು ಕಂಚಿನಡ್ಕ ಪದವಿಗೆ ಪೋಲೀಸ್ ಭದ್ರತೆಯೊಂದಿಗೆ ಕಳುಹಿಸಿ. ಅದನ್ನು ತಡೆಯುವವರ ವಿರುದ್ಧ ನಿರ್ದಾಕ್ಷೀಣ್ಯವಾದ ಕ್ರಮಕೈಗೊಳ್ಳಿ ಎಂಬುದಾಗಿ ಪೋಲೀಸರಿಗೆ ಆದೇಶವನ್ನು ನೀಡಿದರು. ಅದನ್ನು ಅದೇ ಸಭೆಯಲ್ಲಿ ವಿರೋಧಿಸಿದ್ದೆ, ನನ್ನೊಂದಿಗೆ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಲಿ ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ್ ದೇರಾಜೆಯವರು ಧ್ವನಿಗೂಡಿಸಿದರು. ಉದ್ದೇಶಿತ ಘನತ್ಯಾಜ್ಯ ಘಟಕಕ್ಕೆ ಪರಿಸರ ಇಲಾಖೆಯು ವಿಧಿಸಿದ 21 ನಿಭಂಧನೆಗಳನ್ನು ಪೂರೈಸದೇ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ವಿರೋಧಿಸುತ್ತೇವೆ ಎಂಬುದಾಗಿ ತಿಳಿಸಿದ್ದೆ, ಆದರೂ ಅದೇ ಕಂಚಿನಡ್ಕ ಪದವಿನಲ್ಲಿ ಬರೇ ಒಂದು ಕಂಪೌಂಡು ಮಾತ್ರ ರಚಿಸಿ ತ್ಯಾಜ್ಯ ವಿಲೇವಾರಿ ಮಾಡುವ ಪ್ರಯತ್ನವನ್ನು ಪುರಸಭೆ ಮಾಡುತ್ತಿರುವುದರಿಂದ ಗ್ರಾಮದ ಮಹಿಳೆಯರಿಗಾಗಿ ನಾವೆಲ್ಲರೂ ಬೀದಿಗೆ ಬಂದು ಪ್ರತಿಭಟಿಸುವಂತಾಗಿದೆ. ಇಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸಿದರೆ ಯಾವುದೇ ರೀತಿಯ ಪ್ರತಿರೋಧಕ್ಕೂ ನಾವು ಸಿಧ್ಧರಿದ್ಧೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್.ನಾಸೀರ್ ಸಜಿಪ, ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್, ರಶೀದ್ ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here