


ಅದೇಕೋ ಗೊತ್ತಿಲ್ಲ
ಪ್ರತೀ ಕ್ಷಣವೂ ಮಿಡಿವ,ತುಡಿವ ನನ್ ಹೃದಯಾನ ಕಿತ್ತು
ಮೆಷಿನ್ ಹಾರ್ಟೊಂದು ಎದೆಗೂಡಿನೊಳಗಿಡುವ ಬಯಕೆ…
ಹುಚ್ಚುತನ ಎಂದುಕೊಂಡರೂ ಪರ್ವಾಗಿಲ್ಲ
ಭ್ರಾಂತಿ ಅಂದುಕೊಂಡರೂ ಬೇಜಾರಿಲ್ಲ…!
ಪದೇ ಪದೇ ನೋವಿನ ಹೊಡೆತಕ್ಕೆ ಸಿಲುಕಿ ನಲುಗುವ
ಹೃದಯದ ಕುರಿತಾಗಿ ಕಿಂಚಿತ್ ಕಾಳಜಿಯಷ್ಟೆ!
ಭಾವನೆಗಳು ಬೆಲೆಯಿಲ್ಲದ ಸರಕಾಗಿರುವಾಗ
ಹೃದಯಕ್ಕೆಲ್ಲಿಯ ಬೆಲೆ ?
ಒಲವು ಅನ್ನೋದು ಮಾರು ದೂರ ಸರಿದು ನಿಂತು ಅಪಹಾಸ್ಯಗೈಯುತಿದೆ
ಸುಮ್ಮನೆ ಮೊನಚು ಮಾತುಗಳಿಂದ ಚುಚ್ಚಿ ನೋಯಿಸುವುದರಲ್ಲಿ ಅದೇನು ಪ್ರೀತಿಯೋ!
ಪ್ರತೀ ಕ್ಷಣ ನಿನ್ನ ನಿರ್ಲಕ್ಷ್ಯದಿಂದ ಎದೆಯ ಬಡಿತ ಏರುಪೇರಾಗೋದು ನಿಜ..
ಅದೆಂದು ಒಡೆದು ಹೋಗುವುದೋ ಎಂಬ ಭಯ ಕೂಡ!
ತುಸು ಕಷ್ಟವೆ,ನಿನ್ನ ತುಂಬಿಕೊಂಡಿರುವ ಹೃದಯಾನ ಕಿತ್ತು
ಮೆಷಿನ್ ಹಾರ್ಟೊಂದ ಅಳವಡಿಸುವುದು…
ಆದರೂ ಅನಿವಾರ್ಯವಾಗಿದೆ!
ಜೀವಭಾವಗಳಿಲ್ಲದ ನಿನ್ನ ಹೃದಯದೊಂದಿಗೆ
ಸಂಭಾಷಿಸಲು ಸೋತು ಹೋದೆ…
ಹೃದಯದೊಳಗಿನ ಭಾವಗಳು ಸುಮ್ಮನೆ ಆಘಾತಗೊಂಡು ಸತ್ತು ಹೋಗದಿರಲಿ…
ಮೆಷಿನ್ ಹಾರ್ಟು ಯಾರ ಒಲವಿಗೂ ಸೋಲದಿರಲಿ!
✍ಪ್ರಮೀಳಾ ರಾಜ್





