ಬಂಟ್ವಾಳ: ಬಂಟ್ವಾಳ ನಗರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಿ.ದೇವದಾಸ್ ಶೆಟ್ಟಿ ಹಾಗೂ ಸದಸ್ಯರು ಸೋಮವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗದ ಬೂಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಕಚೇರಿಯನ್ನು ಉದ್ಘಾಟಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಮಾತನಾಡಿ, ಬೂಡಾಕ್ಕೆ ಒಬ್ಬ ಸಮರ್ಥ ಅಧ್ಯಕ್ಷರನ್ನು ಸರಕಾರ ಆಯ್ಕೆ ಮಾಡಿದ್ದು, ಎಲ್ಲರ ಮಾರ್ಗದರ್ಶನದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದು ಹಾರೈಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಬೂಡಾಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ನಡೆದಿರುವುದು ಬಂಟ್ವಾಳ ನಗರದ ಬೆಳೆವಣಿಗೆಗೆ ನನಗೆ ಬಲ ಸಿಕ್ಕಿದಂತಾಗಿದೆ ಎಂದರು.
ನೂತನ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ, ಬೂಡಾಕ್ಕೆ 4ನೇ ಅಧ್ಯಕ್ಷರಾಗಿ ತಾನು ಅಧಿಕಾರ ಸ್ವೀಕರಿಸಿದ್ದು, 2009ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಬೂಡಾ ಅಸ್ತಿತ್ವಕ್ಕೆ ಬಂದಿತ್ತು. ಹಿರಿಯರಾದ ಜಿ.ಆನಂದ ಅವರು ಈ ಸ್ಥಾನವನ್ನು ತುಂಬಬೇಕಿತ್ತು. ಆದರೆ ಅವರು ನಮ್ಮನ್ನು ಅಗಲಿರುವುದರಿಂದ ಸರ್ಕಾರ ನನಗೆ ಅವಕಾಶ ನೀಡಿದೆ ಎಂದರು.
ಬೂಡಾ ಸದಸ್ಯರಾಗಿ ಭಾಸ್ಕರ್ ಕುಲಾಲ್, ಸಚಿನ್ ಮೆಲ್ಕಾರ್ ಹಾಗೂ ರಾಮಪ್ರಸಾದ್ ಅವರು ಅಧಿಕಾರ ವಹಿಸಿಕೊಂಡರು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪುರಸಭಾ ಹಿರಿಯ ಸದಸ್ಯ ಗೊವಿಂದ ಪ್ರಭು, ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂದೇಶ್ ಶೆಟ್ಟಿ ಮೊದಲಾದವರು ಕಚೇರಿಗೆ ಭೇಟಿ ನೀಡಿ ಶುಭಹಾರೈಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here